ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಅದರಲ್ಲೂ ಉಪ್ಪಿನಕಾಯಿ ತಯಾರಿಯಲ್ಲಿ ಬಳಸುವುದನ್ನು ನೀವು ಕೇಳಿರಬಹುದು. ಅದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ?
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ, ಎ, ಇ, ಕ್ಯಾಲ್ಸಿಯಂ, ಪ್ರೊಟೀನ್ ಗಳಿವೆ. ಚರ್ಮದ ಸೋಂಕನ್ನು ತಡೆಗಟ್ಟುವ ಜೊತೆಗೆ ತ್ವಚೆಯನ್ನು ಬೆಳ್ಳಗಾಗಿಸುವ ಗುಣ ಇದಕ್ಕಿದೆ. ಕಪ್ಪು ಕಲೆಗಳನ್ನು ಹೋಗಲಾಡಿಸುವ ಜೊತೆಗೆ ಕಳೆಗುಂದಿದ ಮುಖವನ್ನು ಹೊಳೆಯುವಂತೆ ಮಾಡುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಗೆ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ ರಾತ್ರಿ ಮಲಗುವ ಮುನ್ನ 15 ನಿಮಿಷ ಮಸಾಜ್ ಮಾಡಿ. ಬಳಿಕ ಮುಖವನ್ನು ತೊಳೆಯಿರಿ. ಸತತವಾಗಿ 15 ದಿನಗಳವರೆಗೆ ಇದನ್ನು ಮುಂದುವರಿಸಿ. ತ್ವಚೆ ಹೊಳಪು ಪಡೆದುಕೊಳ್ಳುವುದನ್ನು ನೀವೇ ಗಮನಿಸಬಹುದು.
ಬಿಸಿಲಿನಿಂದ ಬಂದ ಬಳಿಕ ನಿಮ್ಮ ತ್ವಚೆ ಬಾಡಿ ಬಸವಳಿದಂತಾಗಿದ್ದರೆ ಆಗಲೂ ಈ ಫೇಸ್ ಪ್ಯಾಕ್ ಪ್ರಯತ್ನಿಸಬಹುದು. ಒಂದು ಚಮಚ ಸಾಸಿವೆ ಎಣ್ಣೆಯನ್ನು ಅಂಗೈಗೆ ಹಾಕಿ ಸರಿಯಾಗಿ ತಿಕ್ಕಿ ಮುಖಕ್ಕೆ ಮಸಾಜ್ ಮಾಡಿ. ಮುಖದಲ್ಲಿ ಕಪ್ಪಾದ ಜಾಗವಿದ್ದರೆ ಅಥವಾ ಮೊಡವೆ ಕಲೆ ಇದ್ದರೆ ಅದನ್ನೂ ಸಾಸಿವೆ ಎಣ್ಣೆ ಹೋಗಲಾಡಿಸುತ್ತದೆ.
ಒಂದು ಚಮಚ ಸಾಸಿವೆ ಎಣ್ಣೆಗೆ ಅರಶಿನ ಪುಡಿ, ಕೇಸರಿ, ಶ್ರೀಗಂಧ, ಕಡಲೆಹಿಟ್ಟು ಬೆರೆಸಿ. ವಾರಕ್ಕೆರಡು ಬಾರಿ ಈ ಸ್ಕ್ರಬ್ ಹಚ್ಚಿಕೊಂಡರೆ ಮುಖದ ಸತ್ತ ಚರ್ಮದ ಕೋಶಗಳು ಇಲ್ಲವಾಗುತ್ತವೆ. ಸಾಸಿವೆ ಎಣ್ಣೆಗೆ ಲಿಂಬೆರಸ ಹಾಗೂ ಮೊಸರು ಬೆರೆಸಿ ಹಚ್ಚಿಕೊಂಡರೆ ಬ್ಯಾಕ್ಟೀರಿಯಾ ವಿರೋಧಿ ಗುಣ ಜಾಗೃತಗೊಂಡು ಮೊಡವೆಗಳು ಮೂಡದಂತೆ ತಡೆಯುತ್ತವೆ.