ಸಾಲ ಅಂದ್ರೇನೆ ಹೊರೆ. ಮರುಪಾವತಿಸಬೇಕಾದ ಹೊಣೆಗಾರಿಕೆಯೂ ಹೌದು. ವಿದೇಶ ಪ್ರವಾಸ, ಮನೆ, ಹೊಸ ಕಾರು, ಸಣ್ಣಪುಟ್ಟ ಗೃಹ ಬಳಕೆ ವಸ್ತುಗಳು ಸೇರಿ ಬದುಕಿನಲ್ಲೀಗ ಪ್ರತಿಯೊಂದಕ್ಕೂ ಇಎಂಐ ಲೆಕ್ಕಾಚಾರ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದತ್ತಾಂಶ ಪ್ರಕಾರ 2021-22ರಲ್ಲಿ ಚಿಲ್ಲರೆ ಸಾಲದ ಪ್ರಮಾಣ ಶೇಕಡ 9.6 ಏರಿದ್ದು, 10.5 ಲಕ್ಷ ಕೋಟಿ ರೂಪಾಯಿ ತಲುಪಿದೆ. ವೈಯಕ್ತಿಕ ಸಾಲದ ಪ್ರಮಾಣ ಹಿಂದಿನ ವರ್ಷ (ಶೇಕಡ 10.7)ಕ್ಕೆ ಹೋಲಿಸಿದರೆ ಕಳೆದ ವರ್ಷ ಶೇಕಡ 12.4 ಆಗಿದೆ.
ವೈಯಕ್ತಿಕ ಸಾಲ ಪಡೆಯುವುದು ಈಗ ಬಹಳ ತ್ರಾಸವೇನೂ ಇಲ್ಲ. ಮೊಬೈಲ್ ಒಂದಿದ್ದರೆ ಸಾಕು. ಇಮೇಲ್, ಫೋನ್ ಬ್ಯಾಂಕಿಂಗ್, ವಾಟ್ಸಾಪ್ ಹೀಗೆ ತರಹೇವಾರಿ ಸರಳ ವಿಧಾನದಲ್ಲಿ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರಾಗಿ ಬ್ಯಾಂಕ್ ಖಾತೆಗೆ ಜಮೆಯೂ ಆಗಿಬಿಡುತ್ತದೆ. ಮರು ಪಾವತಿಗೂ ಇಎಂಐ ಆಯ್ಕೆ ಇದ್ದೇ ಇದೆ. ಇತ್ತೀಚಿನ ವರ್ಷಗಳಲ್ಲಿ ಬೈ ನೌ ಪೇ ಲೇಟರ್ (ಬಿಎನ್‌ಪಿಎಲ್) ಕಂಪನಿಗಳೂ ಹೆಚ್ಚಾಗಿವೆ. 2024ರ ವೇಳೆಗೆ ಇಂತಹ ಚಿಲ್ಲರೆ ಸಾಲಗಳ ಪ್ರಮಾಣ ಶೇಕಡ 15 ಹೆಚ್ಚಳವಾಗಲಿದೆ ಎನ್ನುತ್ತಾರೆ ಪರಿಣತರು.
ಸಾಲವೇನೂ ಸುಲಭದಲ್ಲಿ ಸಿಕ್ಕಿಬಿಡುತ್ತದೆ. ಮರುಪಾವತಿ ವಿಳಂಬವಾದರೆ, ಮಾಡದೇ ಇದ್ದರೆ ಆಗುವ ಕಿರಿಕಿರಿ ಬದುಕಿಗೆ ತ್ರಾಸ ಉಂಟುಮಾಡಿಬಿಡುತ್ತದೆ. ಅನೇಕರ ಪ್ರಾಣಕ್ಕೂ ಇದು ಸಂಚಕಾರ ತಂದೊಡ್ಡಿದ್ದೂ ಇದೆ. ಹೀಗಾಗಿ ಆದಷ್ಟು ಸಾಲದ ಹೊರೆ ಕಡಿಮೆ ಮಾಡುವುದು ಒಳಿತು. ಇದಕ್ಕಾಗಿ ಅನುಸರಿಸಬೇಕಾದ ಆರು ಅಂಶಗಳ ಕಡೆಗೊಮ್ಮೆ ಗಮನಹರಿಸೋಣ.
ಮೊದಲನೇಯದಾಗಿ ಸಾಲ ಪಡೆಯುವ ಸಾಮರ್ಥ್ಯ ಇದೆ ಎಂದು ಸಾಲ ಪಡೆಯಬಾರದು. ಒಂದೊಮ್ಮೆ ಸಾಲ ಪಡೆದರೂ ಅದು ಒಟ್ಟು ಆದಾಯ ಶೇಕಡ 35 ಪಾಲನ್ನು ಮೀರಬಾರದು. ಹಲವಾರು ಸಾಲಗಳಿದ್ದರೆ ಕಡಿಮೆ ಬಡ್ಡಿಯ ಒಂದೇ ಸಾಲಕ್ಕೆ ಎಲ್ಲವನ್ನೂ ಜೋಡಿಸಲು ಪ್ರಯತ್ನಿಸಿ.
ಎರಡನೇಯದಾಗಿ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಲವನ್ನು ಮರುಪಾವತಿಸಲು ಪ್ರಯತ್ನಿಸಿ. ಆದಾಯವನ್ನು ಗಮನಿಸಿಕೊಂಡು ಇಎಂಐ ನಿಗದಿ ಮಾಡಿಕೊಂಡು ನಿಯತವಾಗಿ ಕಟ್ಟಿ ಮುಗಿಸಿ. ಹೆಚ್ಚುವರಿ ಹಣ ಇದ್ದರೆ ಮುಂಗಡವಾಗಿ ಸಾಲದ ಮೂಲಕ್ಕೆ ಪಾವತಿ ಮಾಡಿ.
ಮೂರನೇಯದಾಗಿ, ಇತ್ತೀಚಿನ ದಿನಗಳಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಸುತ್ತಿದ್ದು, ಎಲ್ಲ ಬಡ್ಡಿದರಗಳೂ ಹೆಚ್ಚಾಗುತ್ತಿವೆ. ಹೀಗಾಗಿ ನಿಶ್ಚಿತ ಬಡ್ಡಿದರಕ್ಕೆ ಸಾಲವನ್ನು ವರ್ಗಾಯಿಸಿ.
ನಾಲ್ಕನೇಯದಾಗಿ ಹೂಡಿಕೆ ಮಾಡುವುದಕ್ಕಾಗಿ ಸಾಲವನ್ನು ಮಾಡಲೇಬೇಡಿ.
ಐದನೇಯದಾಗಿ ಸಾಲ ಮಾಡಿದಾಗ, ಸಾಲದ ಮೇಲೆ ವಿಮೆಯನ್ನು ಮಾಡಿಸಿ. ತುರ್ತು ಸಂದರ್ಭದಲ್ಲಿ ಸಾಲದ ಹೊರೆ ಮನೆಯವರಿಗೆ ಅಥವಾ ಜಾಮೀನುದಾರರಿಗೆ ವರ್ಗಾವಣೆ ಆಗದು.
ಆರನೇಯದಾಗಿ, ನಿವೃತ್ತಿಗೆಂದು ಕೂಡಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಬಳಸಬೇಡಿ.