ನಮಗೆ ಗೊತ್ತೋ, ಗೊತ್ತಿಲ್ಲದೆಯೋ ಪ್ರತಿ ನಿತ್ಯ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಗೊತ್ತಾಗದೆ ಮಾಡುವ ತಪ್ಪಿಗಿಂತ ಗೊತ್ತಿದ್ದೂ ಮಾಡುವ ತಪ್ಪು ದೊಡ್ಡದು. ಸಾಮಾನ್ಯವಾಗಿ ಇಂತಹ ತಪ್ಪುಗಳೇ ಸಂಬಂಧದಲ್ಲಿ ಬಿರುಕು ಬಿಡಲು ಕಾರಣವೂ ಆಗಬಹದು. ನಮ್ಮ ಬಗ್ಗೆ ಇತರರಿಗೆ ತಪ್ಪು ಭಾವನೆ ಮೂಡುವುದಕ್ಕೂ ನಾವು ಪದೇ ಪಡೆ ಮಾಡುವ ತಪ್ಪುಗಳೇ ಕಾರಣ.
ನಾವು ತಪ್ಪು ಮಾಡಿದ್ದೇವೆ ಎಂದು ಗೊತ್ತಾದ ತಕ್ಷಣ ಕ್ಷಮೆ ಕೇಳುವುದು ಬಹಳ ದೊಡ್ಡ ಗುಣ. ನಮ್ಮ ಎದುರು ಇರುವವರು ಕ್ಷಮಿಸುತ್ತಾರೋ, ಬಿಡುತ್ತಾರೋ ನಾವಂತೂ ತಕ್ಷಣ ಕ್ಷಮೆ ಕೇಳಿಬಿಟ್ಟರೆ ಪರಿಸ್ಥಿತಿ ಸ್ವಲ್ಪ ತಿಳಿಯಾಗುತ್ತದೆ. ನಮ್ಮಿಂದ ಬೇಸರವಾದವರಿಗೂ ಸ್ವಲ್ಪ ಹೊತ್ತಿನ ಬಳಿಕ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಬಹುದು.
ಸಾರಿ ಎಂಬ ಪದ ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಸಾರಿ ಕೇಳಿದ ಕೂಡಲೇ ನಾವು ಸಂಬಂಧವನ್ನು ಗೌರವಿಸುತ್ತೇವೆ ಎಂಬ ಭಾವನೆ ಮೂಡಿಸಿದಂತಾಗುತ್ತದೆ.
ಎಷ್ಟೋ ಬಾರಿ ಕ್ಷಮೆ ಕೇಳಲು ನಮ್ಮ ಅಹಂ ಅಡ್ಡ ಬರುತ್ತದೆ. ಇದರಿಂದ ಎಷ್ಟೋ ಸಂಬಂಧಗಳೇ ಹಳಸಿಹೋಗಿದೆ. ಹಾಗಾಗಿ ಅಹಂ ಬಿಟ್ಟು ಒಮ್ಮೆ ಸಾರಿ ಕೇಳಿ ನೋಡಿ, ನಿಮ್ಮ ಮನಸ್ಸು ಹಗುರಾಗುತ್ತದೆ.