ಇಂದು ವಿಶ್ವ ಹೃದಯ ದಿನ. ಆಚರಣೆಯ ಉದ್ದೇಶ ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ನಮ್ಮ ಹೃದಯ ಜೀವನದುದ್ದಕ್ಕೂ ನಿಲ್ಲದೆ ಬಡಿಯುತ್ತಲೇ ಇರುತ್ತದೆ. ಹಾಗಾಗಿ ನಾವು ಕೂಡ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಹೃದ್ರೋಗವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಂತೂ ಹೃದಯಾಘಾತದ ಅಪಾಯ ನಿರಂತರವಾಗಿ ಹೆಚ್ಚುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗೊಂದಲಮಯ ಜೀವನಶೈಲಿ ಇದಕ್ಕೆ ಕಾರಣ.
ಇವುಗಳಿಂದಾಗಿ ಮೊದಲು ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ, ನಂತರ ರಕ್ತದೊತ್ತಡ ಹೆಚ್ಚಾಗುತ್ತದೆ. ಅದಾದ್ಮೇಲೆ ಹೃದಯಾಘಾತವಾಗುತ್ತದೆ. ಹಾಗಾಗಿ ನಮ್ಮ ಹೃದಯಕ್ಕೆ ಕಿಂಚಿತ್ತೂ ಒಳ್ಳೆಯದಲ್ಲದ ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ.
ಕಾಫಿ: ಹಾಲು ಮತ್ತು ಸಕ್ಕರೆ ಮಿಶ್ರಿತ ಕಾಫಿಯಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಸಮೃದ್ಧವಾಗಿರುತ್ತದೆ.ಇದನ್ನು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಕಾಫಿಯಲ್ಲಿರುವ ಕೆಫೀನ್‌ನಿಂದಲೂ ಹೃದಯಕ್ಕೆ ಹಾನಿಯಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಧಿಕ ಬಿಪಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ನೂಡಲ್ಸ್ : ಇನ್‌ಸ್ಟಂಟ್ ನೂಡಲ್ಸ್ ಮಕ್ಕಳಿಗೆ ಫೇವರಿಟ್. ತ್ವರಿತವಾಗಿ ಮತ್ತು ಸುಲಭವಾಗಿ ತಯಾರಾಗುವ ನೂಡಲ್ಸ್ ಅನ್ನು ಎಷ್ಟೋ ಮಂದಿ ಬೆಳಗಿನ ತಿಂಡಿಗೇ ಸೇವಿಸ್ತಾರೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಎಣ್ಣೆ ಮತ್ತು ಸೋಡಿಯಂ ಬಳಕೆ ಅಧಿಕವಾಗಿದ್ದು, ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಫ್ರೆಂಚ್ ಫ್ರೈ : ಫ್ರೆಂಚ್ ಫ್ರೈಗಳನ್ನು ತುಂಬಾ ಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರಲ್ಲಿ ಬಹಳಷ್ಟು ಸೋಡಿಯಂ, ಟ್ರಾನ್ಸ್ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು ಇರುತ್ತವೆ, ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಪರಿಧಮನಿಯ ಕಾಯಿಲೆಗೆ ನಮ್ಮನ್ನು ಇದು ತುತ್ತು ಮಾಡಬಹುದು.
ಪಿಜ್ಜಾ : ಇದು ಯುವ ಪೀಳಿಗೆಯ ಫೇವರಿಟ್ ತಿನಿಸು. ಪಿಜ್ಜಾದಲ್ಲಿ ಕೊಬ್ಬು ಮತ್ತು ಸೋಡಿಯಂ ಅಧಿಕವಾಗಿರುತ್ತದೆ. ಇದರಲ್ಲಿರುವ ಚೀಸ್, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ನೀವು ಅಪಾಯವನ್ನು ಕಡಿಮೆ ಮಾಡಲು ಬಯಸಿದರೆ ಪಿಜ್ಜಾವನ್ನು ತಯಾರಿಸಲು ಸಂಪೂರ್ಣ ಗೋಧಿ ಮತ್ತು ಆಲಿವ್ ಎಣ್ಣೆಯನ್ನು ಬಳಸಿ.
ರೆಡ್ ಮೀಟ್ : ರೆಡ್ ಮೀಟ್‌ನಲ್ಲಿ ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬು ಮತ್ತು ಉಪ್ಪಿನ ಅಂಶವಿರುತ್ತದೆ. ಆದ್ದರಿಂದ ಅಂತಹ ಮಾಂಸವನ್ನು ತಿಂಗಳಿಗೊಮ್ಮೆ ಮಾತ್ರ ಸೇವಿಸಲು ಸಲಹೆ ನೀಡಲಾಗುತ್ತದೆ. ಇದು ಪ್ರೋಟೀನ್ ಅಗತ್ಯವನ್ನು ಪೂರೈಸಿದರೂ, ಹೆಚ್ಚುವರಿ ಕೊಬ್ಬು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.