ಆಗಸ್ಟ್ 20 ರಂದು ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಗ್ತಿದೆ. ವರಗಳನ್ನು ದಯ ಪಾಲಿಸುವುದ್ರಿಂದ ದೇವಿಗೆ ವರಮಹಾಲಕ್ಷ್ಮಿ ಎಂದು ಹೆಸರು ಬಂದಿದೆ. ಶುಕ್ರವಾರ ಅಥವಾ ಶುಕ್ಲ ಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು ವರಮಹಾಲಕ್ಷ್ಮಿ ಆರಾಧನೆ ಮಾಡಲಾಗುತ್ತದೆ.
ವೃತ ಆಚರಣೆಯನ್ನು ಪದ್ಧತಿ ಅನುಸಾರ ಮಾಡಬೇಕು. ವೃತ ಮಾಡುವವರು ಸಾಯಂಕಾಲದವರೆಗೂ ಉಪವಾಸವಿರಬೇಕು. ಸಂಕಲ್ಪ ಮಾಡಿ ದೇವಿಯನ್ನು ಕಲಶ ಹಾಗೂ ವಿಗ್ರಹಗಳನ್ನು ಆವಾಹನೆ ಮಾಡಬೇಕು. ಇದಕ್ಕೆ ಲಕ್ಷ್ಮಿ ಕಳಶ ಎನ್ನುತ್ತಾರೆ. ಅಕ್ಕಿ ಜೊತೆ ಒಣ ಹಣ್ಣುಗಳನ್ನು ಇದ್ರಲ್ಲಿ ಇಡಬೇಕು. ವರಮಹಾಲಕ್ಷ್ಮಿ ಪೂಜೆಗೂ ಮುನ್ನ ಗಣೇಶನ ಪೂಜೆ ಮಾಡುವುದು ಬಹಳ ಮುಖ್ಯ.
ಬೆಳ್ಳಿ ಅಥವಾ ಬಂಗಾರದಿಂದ ಮಾಡಿದ ದೇವಿ ಮೂರ್ತಿ ಅಥವಾ ತೆಂಗಿನ ಕಾಯಿಗೆ ಹಳದಿ ಹಿಟ್ಟಿನಿಂದ ಮುಖ ಮಾಡಿಯೂ ಇಡಬಹುದು. ದೇವಿ ಮೂರ್ತಿಗೆ ಸೀರೆಯುಡಿಸಿ, ಬಂಗಾರವನ್ನಿಟ್ಟು ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಲಂಕಾರಕ್ಕಾಗಿಯೇ ಜನರು ಹೆಚ್ಚು ಹೆಚ್ಚು ಹಣ ಖರ್ಚು ಮಾಡ್ತಾರೆ.
ವರಮಹಾಲಕ್ಷ್ಮಿ ಹಬ್ಬದಲ್ಲಿ ದಾರ ವಿಶೇಷವಾದದ್ದು. 12 ದಾರಗಳಿಗೆ 12 ಗಂಟು ಹಾಕಿ ಅರಿಶಿನದ ನೀರಿನಲ್ಲಿ ಅದ್ದಿ ಪೂಜೆ ಮಾಡಲಾಗುತ್ತದೆ. ಈ ದಾರಕ್ಕೂ ಅರಿಶಿನ, ಕುಂಕುಮ, ಹೂ ಹಾಕಿ ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ದಿನದಂದು ಶ್ರೀಸೂಕ್ತವನ್ನು ಪಠಿಸಬೇಕು. ಪೂಜೆ, ನೈವೇದ್ಯದ ಬಳಿಕ ಹಿರಿಯರಿಗೆ ದಕ್ಷಿಣೆ ನೀಡಿ, ದಾರವನ್ನು ಅವ್ರಿಂದ ಪಡೆದು ಬಲಗೈಗೆ ಕಟ್ಟಿಕೊಳ್ಳಬೇಕು. ನಂತ್ರ ಮುತ್ತೈದೆಯರನ್ನು ಕರೆದು ಕುಂಕುಮ ನೀಡಿ ಆಶೀರ್ವಾದ ಪಡೆಯಬೇಕು.
ಒಬ್ಬಟ್ಟು, ಪುಳಿಯೊಗರೆ, ಹುಳಿ ಅನ್ನ, ಹೆಸರು ಬೇಳೆ ಪಾಯಸ, ಕೋಸಂಬರಿಯನ್ನು ದೇವಿಗೆ ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ.