ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಎನ್ ಡಿ ಎ ಅಭ್ಯರ್ಥಿ ದ್ರೌಪದಿ ಮುರ್ಮು, ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಸೇರಿದಂತೆ ಒಟ್ಟು 56 ಮಂದಿ ಅಭ್ಯರ್ಥಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆಗಳಲ್ಲಿ ಸ್ಪರ್ಧಿಸಿ ಲಿಮ್ಕಾ ದಾಖಲೆ ಮಾಡಿರುವ ಕೆ. ಪದ್ಮರಾಜನ್ ಅವರೂ ಸಹ ಚುನಾವಣೆ ಅಖಾಡದಲ್ಲಿದ್ದಾರೆ.
ಪದ್ಮರಾಜನ್ ಅವರು ಇದುವರೆಗೆ ಸ್ಪರ್ಧಿಸಿರುವ ದಾಖಲೆಯ 231 ಚುನಾವಣೆಗಳಲ್ಲಿ ಒಮ್ಮೆಯೂ ಜಯಶಾಲಿಯಾಗಿಲ್ಲ.
ರಾಮ್ ಕುಮಾರ್ ಶುಕ್ಲಾ ಎಂಬುವರು ಕಣದಲ್ಲಿದ್ದು, ತಾನು ರಾಷ್ಟ್ರಪತಿಯಾದರೆ ಕನಿಷ್ಠ ಸೌಲಭ್ಯಗಳೊಂದಿಗೆ ಕಾರ್ಯಭಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅಶೋಕ್ ಕುಮಾರ್ ಧಿಂಗ್ರಾ ಎಂಬ ಅಭ್ಯರ್ಥಿ ಹಲವಾರು ಸಂಘಟನೆಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ತಾನು ರಾಷ್ಟ್ರಪತಿಯಾದರೆ ಸೇನೆ ಮತ್ತು ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ದಯಾಶಂಕರ್ ಅಗರ್ವಾಲ್ ಅವರು ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಕಣದಲ್ಲಿದ್ದಾರೆ. ಇನ್ನು ಅಪಘಾತಕ್ಕೆ ತುತ್ತಾದವರಿಗೆ ನೆರವು ನೀಡುತ್ತಾ ಬಂದಿರುವ ಸೂರಜ್ ಪ್ರಕಾಶ್ ಎಂಬುವರು ತಾವು ಭಾರತದ ರಾಷ್ಟ್ರಪತಿ ಹುದ್ದೆಗೆ ಏರುವ ಎಲ್ಲಾ ಅರ್ಹತೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ದೇಶದ ಸಾಂವಿಧಾನಿಕ ಹುದ್ದೆಯಾಗಿರುವ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಇನ್ನಷ್ಟು ಮಂದಿ ತಮ್ಮ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಅಂದ ಹಾಗೆ 2017 ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 106 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.