ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
ರಾಜಧಾನಿ ಹೆಸರು ಬಂದಿದ್ಹೇಗೆ ?
ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಈ ರೈಲಿಗೆ ರಾಜಧಾನಿ ಹೆಸರು ಹೇಗೆ ಬಂತು ಅನ್ನೋದು ಎಲ್ಲರಲ್ಲೂ ಇರುವ ಕುತೂಹಲ. ವಾಸ್ತವವಾಗಿ ಈ ರೈಲನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ರಾಜಧಾನಿಗೆ ಸಂಪರ್ಕಿಸಲು ಪ್ರಾರಂಭಿಸಲಾಯಿತು.
ರಾಜಧಾನಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ರಾಜಧಾನಿಗಳ ನಡುವೆ ವೇಗದ ರೈಲುಗಳನ್ನು ಓಡಿಸಲು ಮತ್ತು ಜನರ ಪ್ರಯಾಣವನ್ನು ಸುಗಮಗೊಳಿಸಲು ‘ರಾಜಧಾನಿ’ ರೈಲನ್ನು ಪ್ರಾರಂಭಿಸಲಾಯಿತು. ಇದೇ ಕಾರಣದಿಂದ ಅದಕ್ಕೆ ರಾಜಧಾನಿ ಎಂಬ ಹೆಸರು ಬಂದಿದೆ. ರಾಜಧಾನಿ ರೈಲು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ. ಇದೀಗ ಇದರ ವೇಗ ಗಂಟೆಗೆ 140 ಕಿ.ಮೀ. ರಾಜಧಾನಿ ಎಕ್ಸ್‌ಪ್ರೆಸ್ ಭಾರತದ ಅತ್ಯಂತ ಆದ್ಯತೆಯ ರೈಲು. ಅದರ ವೇಗವನ್ನು ಕಾಲಕಾಲಕ್ಕೆ ನವೀಕರಿಸಲಾಗಿದೆ.
ಶತಾಬ್ಧಿ ಎಂಬ ಹೆಸರು ಬರಲು ಕಾರಣ……
ವೇಗವಾಗಿ ಓಡುವ ಶತಾಬ್ದಿ ರೈಲು ಭಾರತದಲ್ಲಿ ಹೆಚ್ಚು ಬಳಸುವ ರೈಲುಗಳಲ್ಲಿ ಒಂದಾಗಿದೆ. ಶತಾಬ್ಧಿಯ ವೇಗ ಗಂಟೆಗೆ 160 ಕಿ.ಮೀ. ಇದರಲ್ಲಿ ಸ್ಲೀಪರ್ ಕೋಚ್‌ಗಳಿಲ್ಲ, ಆದರೆ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗಳಿವೆ. ಈ ರೈಲನ್ನು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 100 ನೇ ಜನ್ಮದಿನದಂದು ಅಂದರೆ 1989 ರಲ್ಲಿ ಪ್ರಾರಂಭಿಸಲಾಯಿತು. ಚಾಚಾ ನೆಹರೂ ಅವರ ಜನ್ಮಶತಮಾನೋತ್ಸವ ದಿನದಂದು ಆರಂಭವಾದ ಕಾರಣ ಅದಕ್ಕೆ ‘ಶತಾಬ್ದಿ’ ಎಂದು ಹೆಸರಿಡಲಾಯಿತು.
ದುರಂತೋ ಕಥೆ ಏನು ?
ದುರಂತೋ ಎಕ್ಸ್‌ಪ್ರೆಸ್ ರೈಲು ಗಂಟೆಗೆ 140 ಕಿಮೀ ವೇಗದಲ್ಲಿ ಓಡುತ್ತದೆ. ಇದು ಕಡಿಮೆ ನಿಲುಗಡೆಗಳನ್ನು ಹೊಂದಿದೆ. ದೀರ್ಘ ಪ್ರಯಾಣ ಮಾಡುವವರಿಗೆ ಇದು ಅತ್ಯುತ್ತಮ ಆಯ್ಕೆ. ಬಂಗಾಳಿ ಪದದಿಂದ ಈ ದುರಂತೊ ಎಂಬ ಹೆಸರು ಬಂದಿದೆ. ನಿಲುಗಡೆಗಳು ಕಡಿಮೆಯಾಗಿರುವುದರಿಂದ, ಇದನ್ನು ರೆಸ್ಟ್‌ಲೆಸ್ ಅಥವಾ ದುರಂತೊ ಎಂದು ಕರೆಯಲಾಯ್ತು. ವಿಶೇಷ ಸಂದರ್ಭಗಳಲ್ಲಿ ಮಾತ್ರ ದುರಂತೊ ರೈಲನ್ನು ಪ್ರತಿದಿನ ಓಡಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ವಾರಕ್ಕೆ 2-3 ದಿನ ಮಾತ್ರ ಈ ರೈಲು ಓಡುತ್ತದೆ.