ರಕ್ಷಾ ಬಂಧನದ ದಿನ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ಕೊಡುವುದು ಸಂಪ್ರದಾಯ. ದೆಹಲಿಯಲ್ಲಿ ಯುವಕನೊಬ್ಬ ತನ್ನ ಸೋದರಿಗೆ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಉಡುಗೊರೆಯಾಗಿ ಕೊಡಲು ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ.
ಚಿಕ್ಕ ವಯಸ್ಸಿನಲ್ಲೇ ಪುಂಡ ಪೋಕರಿಗಳ ಸಹವಾಸ ಮಾಡಿದ್ದ ಯುವಕ ಡ್ರಗ್ಸ್ ಚಟ ಅಂಟಿಸಿಕೊಂಡಿದ್ದ. ಮಾದಕ ವ್ಯಸನಗಳ ಹುಚ್ಚಿಗೆ ಬಿದ್ದು ಓದು ನಿಲ್ಲಿಸಿ, ಕ್ರಿಮಿನಲ್ ಚಟುವಟಿಕೆಗಳನ್ನು ಶುರುವಿಟ್ಟುಕೊಂಡಿದ್ದ. ಜುಲೈ 7ರಂದು ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸುರೇಂದರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ಆ ಮನೆಗೆ ಕನ್ನ ಹಾಕಿದ್ದ ಯುವಕ, ತನ್ನ ಮೊಬೈಲ್ ಫೋನನ್ನು ಅಲ್ಲೇ ಬಿಟ್ಟು ಬಿಟ್ಟಿದ್ದ. ಫೋನ್ ವಶಪಡಿಸಿಕೊಂಡ ಪೊಲೀಸರು ಈತನ ಜಾತಕ ಬಿಚ್ಚಿಟ್ಟಿದ್ದಾರೆ. ಸುಮಾರು 10 ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಆತ ಕಳವು ಮಾಡಿದ್ದ ಮೊಬೈಲ್ ಫೋನ್‌ಗಳು ಹಾಗೂ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾನೆ.
ವಿಚಾರಣೆ ಸಂದರ್ಭದಲ್ಲಿ ತಾನು ಸಹೋದರಿಗೆ ರಕ್ಷಾಬಂಧನದಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ಕೊಡಲು ಬಯಸಿದ್ದೆ. ಅದಕ್ಕಾಗಿಯೇ ಕಳ್ಳತನ ಮಾಡಿದ್ದೇನೆ ಅಂತ ಆತ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ತರುಣ್ ಅಲಿಯಾಸ್ ರೋಹನ್ ಎಂದು ಗುರುತಿಸಲಾಗಿದೆ. ಸುಮಾರು 10 ದರೋಡೆ ಪ್ರಕರಣಗಳಲ್ಲಿ ಇವನು ಭಾಗಿಯಾಗಿದ್ದಾನೆ.