ಮುಸ್ಲಿಂ ವ್ಯಕ್ತಿ ತಲಾಖ್ ಹೇಳುವುದನ್ನು ಅಥವಾ ವೈಯಕ್ತಿಕ ಕಾನೂನಿನ ಪ್ರಕಾರ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಕೌಟುಂಬಿಕ ನ್ಯಾಯಾಲಯಗಳು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ಕೇರಳ ಹೈಕೋರ್ಟ್ ಗಮನಿಸಿದೆ.
“ಖಾತ್ರಿಪಡಿಸಿದ ವೈಯಕ್ತಿಕ ಕಾನೂನಿನ ಪ್ರಕಾರ ಒಬ್ಬರ ನಡವಳಿಕೆ ಅಥವಾ ನಿರ್ಧಾರವನ್ನು ನಿರ್ಬಂಧಿಸಲು ಅಥವಾ ನಿಯಂತ್ರಿಸಲು ನ್ಯಾಯಾಲಯವು ಯಾವುದೇ ಪಾತ್ರವನ್ನು ಹೊಂದಿಲ್ಲ” ಎಂದು ಕೇರಳ ಹೈಕೋರ್ಟ್ ಹೇಳಿದೆ.
ತಲಾಖ್ ಹೇಳುವುದನ್ನು ತಡೆಯುವ ಕುರಿತಂತೆ ಚವರ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೊಲ್ಲಂ ಮೂಲದ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಈಗಾಗ್ಲೇ ತಲಾಖ್ ಅನ್ನು ಉಚ್ಚರಿಸಲು ಪ್ರಾರಂಭಿಸಿದ್ದಾನೆ ಮತ್ತು ಮೊದಲ ಹಾಗೂ ಎರಡನೇ ತಲಾಖ್ ಅನ್ನು ಉಚ್ಚರಿಸಿದ್ದಾನೆ. ವೈಯಕ್ತಿಕ ನಂಬಿಕೆ ಮತ್ತು ಆಚರಣೆಗೆ ಅನುಗುಣವಾಗಿ ಕಾರ್ಯನಿರ್ವಹಿಸದಂತೆ ಯಾವುದೇ ಆದೇಶಗಳನ್ನು ಜಾರಿಗೊಳಿಸಿದರೆ, ಅದು ಅವರ ಸಾಂವಿಧಾನಿಕವಾಗಿ ಸಂರಕ್ಷಿತ ಹಕ್ಕುಗಳನ್ನು ಅತಿಕ್ರಮಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ಈ ರೀತಿಯ ಪ್ರಕ್ರಿಯೆಗಳಲ್ಲಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮರು ಮದುವೆಯಾಗುವ ವ್ಯಕ್ತಿಯ ಹಕ್ಕಿಗೆ ಸಂಬಂಧಿಸಿದಂತೆ, ವೈಯಕ್ತಿಕ ಕಾನೂನಿನಡಿಯಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಮದುವೆಯಾಗುವ ಹಕ್ಕನ್ನು ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕಾನೂನು ಅಂತಹ ರಕ್ಷಣೆಯನ್ನು ಖಾತ್ರಿಪಡಿಸಿದರೆ, ಒಬ್ಬ ವ್ಯಕ್ತಿಯು ತನ್ನ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಒಬ್ಬರ ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ವರ್ತಿಸಬಾರದು ಎಂದು ನಿರ್ಧರಿಸಲು ನ್ಯಾಯಾಲಯಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.