ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್-2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದಾರೆ.
ಚಂಡೀಗಢದ 21 ವರ್ಷದ ಹರ್ನಾಜ್, ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮ್ಸ್ವಾನೆ ಅವರನ್ನು ಹಿಂದಿಕ್ಕಿ ಭುವನ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ.
ಹರ್ನಾಜ್ ಪಟ್ಟ ಅಲಂಕರಿಸಿದ ಕೆಲವೇ ಕ್ಷಣಗಳಲ್ಲಿ ನಟಿ ಊರ್ವಶಿ ರೌಟೇಲಾ ಅವರು ವಿಶ್ವ ಸುಂದರಿ ಜೊತೆಗೆ ತ್ರಿವರ್ಣ ಧ್ವಜವನ್ನು ಬೀಸುವ ಮೂಲಕ ಐತಿಹಾಸಿಕ ವಿಜಯವನ್ನು ಆಚರಿಸುತ್ತಿರುವುದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಟಿ ರೌಟೆಲಾ ಅವರು, ಅಂತಾರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರ ಸದಸ್ಯರಾಗಿ ಇಸ್ರೇಲ್‌ನಲ್ಲಿದ್ದರು. ವಿಡಿಯೋದಲ್ಲಿ ಅವರು, ಹರ್ನಾಜ್ ಅವರೊಂದಿಗೆ ಮಾತನಾಡುತ್ತಾ ಭಾರತೀಯ ಧ್ವಜವನ್ನು ಹಿಡಿದಿರುವುದನ್ನು ಕಾಣಬಹುದು.
2015 ರ ಮಿಸ್ ದಿವಾ ಆಗಿದ್ದ ಊರ್ವಶಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯಾಮರಾಗೆ ಫೋಸ್ ನೀಡುವಾಗ ಇಬ್ಬರು ಕೂಡ ಬಹಳ ಸಂತೋಷದಿಂದ ಪರಸ್ಪರ ತಬ್ಬಿಕೊಂಡಿದ್ದಾರೆ. ಅಲ್ಲದೆ ಊರ್ವಶಿ ಅವರನ್ನು ಕೇವಲ ತೆರೆ ಮೇಲೆ ಮಾತ್ರ ನೋಡಿದ್ದ ಹರ್ನಾಜ್ ನಂಬಲಾಗದಷ್ಟು ಖುಷಿಯಾಗಿದ್ದರು.
20 ವರ್ಷಗಳ ಬಳಿಕ ಭಾರತಕ್ಕೆ ಹರ್ನಾಜ್ ಮುಖಾಂತರ ಮಿಸ್ ಯೂನಿವರ್ಸ್ ಕಿರೀಟ ಸಿಕ್ಕಿದೆ. ಈ ಮೊದಲು 1994 ರಲ್ಲಿ ನಟಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಈ ಪಟ್ಟವನ್ನು ಅಲಂಕರಿಸಿದ್ದರು.