
ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸದಾ ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪಕ್ಷಿಯೊಂದು ತನ್ನ ಮೊಟ್ಟೆಗಳ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋವನ್ನು ಹಂಚಿಕೊಳ್ಳುತ್ತಾ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು, ತಾಯಿ, ನಿನಗೆ ನಮಸ್ಕಾರ ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.
ಹಕ್ಕಿಯೊಂದು ತನ್ನ ಮೊಟ್ಟೆಗಳ ಸುತ್ತಲೂ ಓಡಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಅಗೆಯುವ ಯಂತ್ರವು ಮಣ್ಣಿನ ರಸ್ತೆಯ ಮೂಲಕ ಹಾದುಹೋಗುತ್ತದೆ. ಮತ್ತು ಮೊಟ್ಟೆಗಳ ಹತ್ತಿರ ಅಪಾಯಕಾರಿಯಾಗಿ ಚಲಿಸುತ್ತದೆ. ಇದನ್ನು ಗಮನಿಸಿದ ಹಕ್ಕಿ ಕೂಡಲೇ ತನ್ನ ಮೊಟ್ಟೆಯ ಬಳಿ ಧಾವಿಸಿ ಬರುತ್ತದೆ. ಹತ್ತಿರ ಬರುತ್ತಿರುವ ಅಗೆಯುವ ಯಂತ್ರಕ್ಕೆ ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತಾ ಚಿಲಿಪಿಲಿಗುಟ್ಟುತ್ತಾ ಕೂಗಿದೆ.
ಅಗೆಯುವ ಯಂತ್ರವು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವುದನ್ನು ಮುಂದುವರೆಸುತ್ತದೆ. ಹಕ್ಕಿ ಮಾತ್ರ ಸ್ಥಳದಿಂದ ಕದಲುವುದೇ ಇಲ್ಲ. ತನ್ನ ಮೊಟ್ಟೆಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಅಂತಿಮವಾಗಿ, ಅಗೆಯುವ ಯಂತ್ರವು ಪಕ್ಷಿ ಮತ್ತು ಅದರ ಮೊಟ್ಟೆಗಳಿಂದ ದೂರ ಸರಿಯುತ್ತದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ತಾಯಿ ಪ್ರೀತಿಗೆ ಸರಿಸಾಟಿ ಯಾರಿಲ್ಲ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.