alex Certify ʼಮಾಫಿಯಾʼಗೆ ಬಲಿಯಾಗಿದ್ದಾರೆ ಈ ದಕ್ಷ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಫಿಯಾʼಗೆ ಬಲಿಯಾಗಿದ್ದಾರೆ ಈ ದಕ್ಷ ಅಧಿಕಾರಿಗಳು

ಅನ್ಯಾಯವನ್ನು ವಿರೋಧಿಸಲು ಹೋಗಿ ಅಮಾನುಷವಾಗಿ ಕೊಲೆಯಾದ ಅಮಾಯಕರು ಅದೆಷ್ಟಾದರೋ ಗೊತ್ತಿಲ್ಲ. ಹೀಗೆ ಸಾವನ್ನಪ್ಪಿದ ದಕ್ಷ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಿ ಸರ್ಕಾರಗಳು ಕೈ ತೊಳೆದುಕೊಳ್ಳುತ್ತವೆ. ಆದರೆ ಮಾಫಿಯಾ ಮಾತ್ರ ತನ್ನ ದಾರಿಗೆ ಅಡ್ಡಬಂದ ಅದೆಷ್ಟೋ ಜೀವಗಳನ್ನು ಸಲೀಸಾಗಿ ಹತ್ಯೆ ಮಾಡುತ್ತಿದೆ. ಇಂತಹ ಹತ್ಯೆಗೆ ಬಲಿಯಾದ ಕೆಲವು ನಿಷ್ಟಾವಂತರು ಇಲ್ಲಿದ್ದಾರೆ ನೋಡಿ.

ಯಶವಂತ ಸೋನಾವಣೆ: ಮಹಾರಾಷ್ಟ್ರದ ಮಾಲೆಗಾಂವ್ ನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ 42 ವರ್ಷದ ಯಶವಂತ ಸೋನಾವಣೆ ಅವರಿಗೆ, ಪೆಟ್ರೋಲಿಗೆ ಸೀಮೆಎಣ್ಣೆ ಸೇರಿಸಿ ಮಾರುತ್ತಿದ್ದ ಸುದ್ದಿ ಸಿಕ್ಕಿತ್ತು. 2011 ಜನವರಿ 25ರಂದು ಪೆಟ್ರೋಲ್, ಡೀಸೆಲ್ ಸ್ಮಗ್ಲಿಂಗಿಗೆ ಕುಖ್ಯಾತಿ ಪಡೆದಿದ್ದ ನಂದಗಾಂವ್ ಗೆ ತೆರಳಿದರು.

ಅಲ್ಲಿ ಕೆಲವರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದಾಗ ಪಾನೇವಾಡಿಯ ಬಳಿ ಪೆಟ್ರೋಲ್ ಟ್ಯಾಂಕರಿಗೆ ಸೀಮೆಎಣ್ಣೆ ಕಲಬೆರಕೆ ಮಾಡುತ್ತಿರುವುದು ಕಂಡುಬಂತು. ಇದನ್ನು ನೋಡಿದಾಕ್ಷಣ ಸೋನೆವಣೆ ಪೊಲೀಸ್ ನೆರವಿಗೆ ಫೋನ್ ಮಾಡಿದರು. ಆಗಲೇ ಅವರ ಮೇಲೆ, ಪೋಪಟ್ ಶಿಂಧೆ ಮತ್ತವರ ತಂಡ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವುದರೊಳಗಾಗಿ ಒಬ್ಬ ನಿಷ್ಟಾವಂತ ಅಧಿಕಾರಿ ಸುಟ್ಟು ಬೂದಿಯಾಗಿದ್ದರು.

ಸತ್ಯೇಂದ್ರ ದುಬೆ: ಕಾನ್ಪುರ ಐಐಟಿಯಲ್ಲಿ ಹೆಚ್ಚು ಅಂಕ ಗಳಿಸಿ ಪಾಸಾದ ವಿದ್ಯಾರ್ಥಿ ದುಬೆ. ಇವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿದ್ದರು. ಬಿಹಾರದಲ್ಲಿ ಕೇಂದ್ರ ಸರಕಾರದ ಯೋಜನೆ ಗೋಲ್ಡನ್ ಕ್ವಾಡಿಲೇಟರ್ ಹೈವೇ ಪ್ರೊಜೆಕ್ಟ್ ನಲ್ಲಿ ನಡೆದ ಮೋಸವನ್ನು ಬಯಲಿಗೆ ತಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಪರಿಣಾಮವಾಗಿ 2003 ರ ನವೆಂಬರ್ 27ರಂದು ಬೆಳ್ಳಂಬೆಳಿಗ್ಗೆ ಬಿಹಾರದ ಗಯಾದಲ್ಲಿ ಗುಂಡಿಗೆ ಬಲಿಯಾದರು. ಸತ್ತಾಗ ದುಬೆ ಅವರಿಗೆ ಕೇವಲ 32 ವರ್ಷ.

ಮಂಜುನಾಥ ಷಣ್ಮುಗಂ: ಪ್ರತಿಷ್ಠಿತ ಐಐಎಮ್ ಲಖ್ನೋದ ಪದವೀಧರ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಎ ಗ್ರೇಡ್ ಮಾರ್ಕೆಟಿಂಗ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಲಖಿಮಪುರದಲ್ಲಿ ಕಲಬೆರಕೆ ಇಂಧನ ಮಾಡುತ್ತಿದ್ದ ಎರಡು ಪೆಟ್ರೋಲ್ ಪಂಪ್ ಗಳನ್ನು ಮುಚ್ಚಲು ಆದೇಶಿಸಿದ್ದರು.

ಆದರೂ ಅಕ್ರಮ ದಂಧೆ ನಿಲ್ಲದ ಕಾರಣ 2005 ನವೆಂಬರ್ 19 ರಂದು ದಿಢೀರ್ ದಾಳಿ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಷಣ್ಮುಗಂ ಅವರನ್ನು ಹತ್ಯೆ ಮಾಡಲಾಯಿತು. ಅಕ್ರಮದ ವಿರುದ್ಧ ದನಿ ಎತ್ತಿದ್ದ ಅವರ ದೇಹವನ್ನು 6 ಕ್ಕಿಂತ ಹೆಚ್ಚು ಬುಲೆಟ್ ಗಳು ಸೀಳಿದ್ದವು.

ಆಗ ಅವರಿಗೆ ಕೇವಲ 27 ವರ್ಷ. ಷಣ್ಮುಗಂ ಅವರ ಕೊಲೆಯಲ್ಲಿ ಭಾಗಿಯಾಗಿದ್ದ ಪೆಟ್ರೋಲ್ ಪಂಪಿನ ಮಾಲೀಕ ಪವನ್ ಕುಮಾರ್ ಹಾಗೂ ಇತರೆ 7 ಜನರನ್ನು ಪೊಲೀಸರು ಬಂಧಿಸಿದ್ದರು.

ನರೇಂದ್ರಕುಮಾರ್ ಸಿಂಗ್: ಇವರು ಕೇವಲ 30 ವರ್ಷ ವಯಸ್ಸಿನ ಐಪಿಎಸ್ ಅಧಿಕಾರಿ. 2012ರಲ್ಲಿ ಮಧ್ಯಪ್ರದೇಶದ ಚಂಬಲ್ ಜಿಲ್ಲೆಯ ಉಪವಿಭಾಗದ ಅಧಿಕಾರಿಯಾಗಿ ಬಂದಿದ್ದರು. ಅಕ್ರಮ ಗಣಿಗಾರಿಕೆಯ ಮಾಹಿತಿ ಸಿಕ್ಕು ಸ್ಥಳಕ್ಕೆ ಧಾವಿಸಿ ಕಲ್ಲು ಸಾಗಾಣಿಕೆಯ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಪ್ರಯತ್ನಿಸಿದರು.

ಆದರೆ ಆ ಟ್ರ್ಯಾಕ್ಟರ್ ನಿಲ್ಲದೇ ಇವರ ಮೈಮೇಲೆ ಬಂತು. ಆಯತಪ್ಪಿ ಬಿದ್ದ ನರೇಂದ್ರಕುಮಾರ್ ಅವರ ಮೇಲೆ ಟ್ರ್ಯಾಕ್ಟರ್ ಹಾದು ಸುಮಾರು 50 ಮೀಟರ್ ದೂರ ಅವರನ್ನು ಎಳೆದೊಯ್ಯಿತು. ಈ ಮೂಲಕ ಮತ್ತೊಬ್ಬ ದಕ್ಷ ಪೊಲೀಸ್ ಅಧಿಕಾರಿಯ ಅಂತ್ಯವಾಗಿತ್ತು.

ಇದೇ ಮೊದಲು ಇದೇ ಕಡೆ ಎಂದೇನಿಲ್ಲ ಇದರ ಹೊರತಾಗ್ಯೂ ಬೇಕಾದಷ್ಟು ಮಂದಿ ದಕ್ಷ ಅಧಿಕಾರಿಗಳು ಇದಕ್ಕೆ ಬಲಿಯಾಗಿದ್ದಾರೆ ಮತ್ತೆ ಕೆಲವರು ಈ ಮಾಫಿಯಾದ ಮುಂದೆ ಸೆಣಸಲಾಗದೆ ಅಸಹಾಯಕರಾಗಿ ಹುದ್ದೆ ತೊರೆದಿದ್ದಾರೆ.

ಇಷ್ಟೆಲ್ಲ ಆದರೂ ಮಾಫಿಯಾಗೆ ಬಲಿಯಾಗುವವರ ಸಂಖ್ಯೆ ನಿಂತಿಲ್ಲ. ಬದಲಿಗೆ ಹೆಚ್ಚುತ್ತಲೇ ಇದೆ. ಏನೋ ಸಾಧಿಸಬೇಕು, ಅಕ್ರಮ ದಂಧೆಗಳನ್ನು ನಿಲ್ಲಿಸಬೇಕು, ಅನ್ಯಾಯವನ್ನು ತಡೆಗಟ್ಟಬೇಕು ಎಂದು ಬಂದವರು ಸದ್ದಿಲ್ಲದೇ ಬಲಿಯಾಗುತ್ತಿದ್ದರೂ ಸರ್ಕಾರಗಳು ಮಾತ್ರ ಕಣ್ಮುಚ್ಚಿ ಕುಳಿತಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...