ಬಹಳಷ್ಟು ಮಹಿಳೆಯರಲ್ಲಿ ತುಟಿಯ ಮೇಲ್ಭಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಹಾರ್ಮೋನ್ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಆಗೆಲ್ಲಾ ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಕಾಮನ್. ವ್ಯಾಕ್ಸಿಂಗ್ ಅಥವಾ ಥ್ರೆಡ್ಡಿಂಗ್ ಮೂಲಕ ಅಪ್ಪರ್ ಲಿಪ್ ನ ಬೇಡದ ಕೂದಲನ್ನು ಕಿತ್ತು ಹಾಕಲಾಗುತ್ತದೆ.
ಮಾರುಕಟ್ಟೆಯಲ್ಲಿ ಇನ್ನೊಂದಷ್ಟು ಕಾಸ್ಮೆಟಿಕ್ ಚಿಕಿತ್ಸೆಗಳೂ ಇವೆ. ಆದ್ರೆ ಅದ್ಯಾವುದೂ ಸೇಫ್ ಅಲ್ಲ. ನಿಮ್ಮ ಮುಖದ ಅಂದವನ್ನು ಅವು ಹಾಳು ಮಾಡಬಹುದು. ಹಾಗಾಗಿ ಮನೆಯಲ್ಲೇ ನೈಸರ್ಗಿಕ ವಿಧಾನಗಳ ಮೂಲಕ ಬೇಡದ ಕೂದಲನ್ನು ತೆಗೆದು ಹಾಕಿ. ಅದ್ಹೇಗೆ ಅಂತಾ ನೋಡೋಣ.
ಎಗ್ ವೈಟ್ : ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಒಂದು ಚಮಚ ಸಕ್ಕರೆ ಹಾಗೂ ಒಂದು ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಪ್ಪರ್ ಲಿಪ್ ಗೆ ಹಚ್ಚಿಕೊಂಡು 30 ನಿಮಿಷ ಹಾಗೇ ಬಿಡಿ. 30 ನಿಮಿಷಗಳ ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಹೀಗೆ ಮಾಡುವುದರಿಂದ ತುಟಿಯ ಮೇಲ್ಭಾಗದ ಕೂದಲನ್ನು ನಿವಾರಿಸಬಹುದು.
ಹಾಲು ಮತ್ತು ಅರಿಶಿನ : ಒಂದು ಚಮಚ ಹಾಲಿಗೆ ಒಂದು ಚಮಚ ಅರಿಶಿನವನ್ನು ಬೆರೆಸಿ. ಅದನ್ನು ಅಪ್ಪರ್ ಲಿಪ್ ಗೆ ಹಚ್ಚಿಕೊಂಡು ಒಣಗುವವರೆಗೆ ಹಾಗೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುವುದರಿಂದ ಅಪ್ಪರ್ ಲಿಪ್ ಕೂದಲನ್ನು ತೆಗೆದು ಹಾಕಬಹುದು.
ಅರಿಶಿನ, ಕಡಲೆಹಿಟ್ಟು ಮತ್ತು ಮೊಸರು : ಒಂದು ಚಮಚ ಮೊಸರಿಗೆ ಅರ್ಧ ಚಮಚ ಕಡಲೆಹಿಟ್ಟು ಮತ್ತು ಅರಿಶಿನವನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ಅಪ್ಪರ್ ಲಿಪ್ ಗೆ ಹಚ್ಚಿಕೊಂಡು, ಚೆನ್ನಾಗಿ ಒಣಗಿದ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಈ ರೀತಿ ಮಾಡುವುದರಿಂದ ಅಪ್ಪರ್ ಲಿಪ್ ಕೂದಲು ಬೆಳೆಯುವುದಿಲ್ಲ.
ಸಕ್ಕರೆ : 2 ಚಮಚ ಸಕ್ಕರೆ, ಒಂದು ಚಮಚ ನಿಂಬೆ ರಸ ಮತ್ತು ಬಟ್ಟೆಯ ತುಂಡೊಂದನ್ನು ತೆಗೆದುಕೊಳ್ಳಿ. ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದರಲ್ಲಿ ಸಕ್ಕರೆ ಹಾಕಿ ಬಿಸಿ ಮಾಡಿ. ನಂತರ ನಿಂಬೆ ರಸ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ತಣ್ಣಗಾದ ಬಳಿಕ ಅದನ್ನು ಅಪ್ಪರ್ ಲಿಪ್ ಗೆ ಹಚ್ಚಿಕೊಳ್ಳಿ. ಅದರ ಮೇಲೆ ಬಟ್ಟೆಯ ತುಂಡನ್ನು ಹಾಕಿ ಪ್ರೆಸ್ ಮಾಡಿ. ನಂತರ ಎಳೆದು ಕೂದಲನ್ನು ನೀಟಾಗಿ ತೆಗೆಯಿರಿ.
ಆಲೂಗಡ್ಡೆ ಜ್ಯೂಸ್ : ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿಯಿರಿ. ನಂತರ ಅದನ್ನು ಹಿಂಡಿ 2 ಸ್ಪೂನ್ ನಷ್ಟು ಜ್ಯೂಸ್ ಬೇರ್ಪಡಿಸಿ. ಅದನ್ನು ಮಲಗುವ ಮುನ್ನ ಅಪ್ಪರ್ ಲಿಪ್ ಗೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದ ಮೇಲೆ ತೊಳೆದುಕೊಳ್ಳಿ. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಬೇಡದ ಕೂದಲನ್ನು ನಿವಾರಿಸಬಹುದು.