ಬ್ಲೀಚಿಂಗ್ ಪುಡಿಯನ್ನು ಮನೆಯಲ್ಲಿ ಹಲವು ಬಾರಿ ನೀವೂ ಬಳಸಿರುತ್ತೀರಿ. ಅದರೆ ಇದರ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…?
ಇದೊಂದು ಅಪಾಯಕಾರಿ ರಾಸಾಯನಿಕ. ಇದನ್ನು ಬೇಕಾಬಿಟ್ಟಿ ಬಳಸುವ ಮುನ್ನ ಇಲ್ಲಿ ಕೇಳಿ. ಮಕ್ಕಳಿಗೆ ಬ್ಲೀಚ್ ಹೆಚ್ಚು ಅಪಾಯಕಾರಿ, ಇದು ವಿಷಕಾರಿಯೂ ಹೌದು. ಹಾಗಾಗಿ ಮಕ್ಕಳಿಗೆ ಇದನ್ನು ಮುಟ್ಟಲು ಬಿಡಬೇಡಿ.
ಬ್ಲೀಚ್ ಬಳಸಿದ ಬಳಿಕವೂ ನೆಲದ ಮೇಲೆ ಇದರ ಅಂಶ ಉಳಿದಿರುವ ಸಾಧ್ಯತೆ ಇದೆ. ಬ್ಲೀಚ್ ಬಳಸಿದ ಪ್ರದೇಶದಲ್ಲಿ ಹೆಚ್ಚು ಓಡಾಡುವುದರಿಂದ ಅಸ್ತಮಾ, ಅಲರ್ಜಿ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇದರತ್ತ ಮಕ್ಕಳನ್ನು ಹೆಚ್ಚು ಹೋಗಲು ಬಿಡದಿರಿ.
ಬ್ಲೀಚ್ ಜೊತೆ ಅಮೋನಿಯಾ ಸೇರಿದರೆ ಕ್ಲೋರಿನ್ ಗ್ಯಾಸ್ ಉಂಟಾಗುತ್ತದೆ. ಇದು ಶ್ವಾಸಕೋಶ ಮತ್ತು ಶ್ವಾಸನಾಳದಲ್ಲಿ ತೊಂದರೆ ಉಂಟು ಮಾಡುತ್ತದೆ. ಇದರೊಂದಿಗೆ ವಿನೇಗರ್ ಸೇರಿದರೂ ಅಪಾಯ ಖಚಿತ.
ಬ್ಲೀಚ್ ನ ವಾಸನೆ ಕೆಲವರಿಗೆ ತಲೆನೋವು, ಕೆಮ್ಮು ಅಥವಾ ಕಣ್ಣುರಿ ತಂದೀತು. ಇದು ನೇರವಾಗಿ ಕಣ್ಣಿಗೆ ತಾಕಿದರೆ ಕಣ್ಣಿನ ಸಮಸ್ಯೆಯೂ ಕಂಡುಬಂದೀತು. ಮನೆಯ ಮಕ್ಕಳಂತೆ ಮನೆಯ ಸಾಕುಪ್ರಾಣಿಗಳಿಗೂ ಇದರಿಂದ ತೊಂದರೆಯಾಗಬಹುದು. ಹಾಗಾಗಿ ಇದನ್ನು ಬಳಸುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸಿ.