ಪ್ರತಿಯೊಂದು ಸಂಬಂಧ ಗಟ್ಟಿಯಾಗಿರಲು ನಂಬಿಕೆ, ವಿಶ್ವಾಸ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸಂಬಂಧ ಬಹುಬೇಗ ಮುರಿದು ಬೀಳುತ್ತದೆ. ಸಣ್ಣ ವಿಷಯಕ್ಕೆ ಅಸಮಾಧಾನ, ಕೋಪ, ಕೆಲಸದ ಒತ್ತಡ ಇವೆಲ್ಲವೂ ಬ್ರೇಕ್ ಅಪ್ ಗೆ ಕಾರಣವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕರು ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದೀರ್ಘ ಸಮಯಕ್ಕೆ ಸಂಗಾತಿ ಆಯ್ಕೆ ಮಾಡುವ ಬದಲು ಕೆಲ ದಿನಗಳ ಮಟ್ಟಿಗೆ ಸಂಗಾತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹುಡುಗಿ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡು ಹುಡುಗ ಗಂಭೀರವಾಗಿ ತೆಗೆದುಕೊಳ್ಳದೆ ಹೋದಾಗ ಇಬ್ಬರ ಮಧ್ಯೆ ಗಲಾಟೆ ಶುರುವಾಗುತ್ತದೆ. ಕೆಲವೇ ದಿನಗಳಲ್ಲಿ ಸಂಬಂಧ ಮುರಿದು ಬೀಳುತ್ತದೆ.
ಪ್ರತಿಯೊಂದು ಹೆಜ್ಜೆಗೂ ಅಡ್ಡಗಾಲು ಹಾಕುವುದು ಸಂಬಂಧ ಹಾಳು ಮಾಡುತ್ತದೆ. ಸ್ವಾತಂತ್ರ್ಯ ಇಬ್ಬರಿಗೂ ಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ ದಬ್ಬಾಳಿಕೆ ಹೆಚ್ಚಾಗ್ತಿದೆ. ಪರಸ್ಪರರ ಮಧ್ಯೆ ಅಗೌರವದ ಜೊತೆ ಅವ್ರ ಸ್ನೇಹಿತರು, ಅವ್ರ ವರ್ತನೆ, ಬಟ್ಟೆ ಎಲ್ಲದಕ್ಕೂ ಸಂಗಾತಿ ಅಡ್ಡಿಯಾಗುವುದು ಬ್ರೇಕ್ ಅಪ್ ಗೆ ಸುಲಭವಾಗಿ ದಾರಿಮಾಡಿಕೊಡುತ್ತದೆ.
ಸ್ವಾತಂತ್ರ್ಯದ ಜೊತೆ ಗೌಪ್ಯತೆ ಕೂಡ ಮುಖ್ಯ. ಸಂಗಾತಿ ಬೇರೆಯವರ ಜೊತೆ ಮಾತನಾಡಬಾರದು. ಸಣ್ಣ ಸಣ್ಣ ವಿಷ್ಯಗಳನ್ನು ತನ್ನ ಮುಂದೆ ಹೇಳಬೇಕೆಂದು ಕೆಲವರು ನಿರೀಕ್ಷೆ ಮಾಡ್ತಾರೆ. ಸಂಗಾತಿ ವಿಷ್ಯವನ್ನು ಹೇಳದೆ ಹೋದಾಗ ಗಲಾಟೆ ಶುರುವಾಗುತ್ತದೆ.
ಸಂಗಾತಿ ಜೊತೆಗಿದ್ರೆ ನಾನು ಸುರಕ್ಷಿತ ಎಂಬ ಭಾವನೆ ಬರುವುದು ಅತ್ಯಗತ್ಯ. ಸಂಗಾತಿ ನನ್ನಷ್ಟೆ ಕಾಳಜಿ ತೋರಿಸುತ್ತಾರೆ. ನನ್ನನ್ನು ಅರ್ಥ ಮಾಡಿಕೊಳ್ತಿದ್ದಾರೆ. ಅವ್ರ ಮೇಲೆ ವಿಶ್ವಾಸವಿಡಬಹುದು ಎಂಬ ನಂಬಿಕೆ ಬರಬೇಕಾಗುತ್ತದೆ. ಸುರಕ್ಷತೆ, ವಿಶ್ವಾಸ, ನಂಬಿಕೆ ಬಂದಾಗ ಮಾತ್ರ ಸಂಬಂಧ ಗಟ್ಟಿಯಾಗಲು ಸಾಧ್ಯ.