ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರಾಣಿಕ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಪ್ರೊಫೆಸರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಡಾ.ಜಿತೇಂದ್ರ ಕುಮಾರ್ ಅಮಾನತುಗೊಂಡ ಪ್ರೊಫೆಸರ್. ಇವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳು, ಮತ್ತದರ ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ ಬಗ್ಗೆ ತರಗತಿಯಲ್ಲಿ ಪ್ರೊಫೆಸರ್ ಉಲ್ಲೇಖ ಮಾಡಿದ್ದಾರೆ. ಬ್ರಹ್ಮ ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡುತ್ತಿದ್ದ, ಗೌತಮ ಋಷಿ ಪತ್ನಿಯ ಮೇಲೆ ಬಲಾತ್ಕಾರ ಮಾಡಿದ್ದ. ಭಗವಾನ್ ವಿಷ್ಣು, ಜಲಂಧರನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದ ಎಂದೆಲ್ಲ ಪ್ರೊಫೆಸರ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.
ನಿರ್ಭಯ ಅತ್ಯಾಚಾರ ಪ್ರಕರಣ ಹಾಗೂ ಮಥುರಾದಲ್ಲಿ ನಡೆದ ರೇಪ್ ಕೇಸ್ ಬಗ್ಗೆಯೂ ಉಲ್ಲೇಖಿಸಿದ ಜಿತೇಂದ್ರ ಕುಮಾರ್, ಹಿಂದು ಸಂಪ್ರದಾಯದಲ್ಲಿರೋ ವಿವಿಧ ಬಗೆಯ ಮದುವೆಗಳ ಬಗ್ಗೆ ಮಾತನಾಡಿದ್ದಾರೆ. ಪ್ರೊಫೆಸರ್ ಮಾಡಿರೋ ಪಾಠದ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳೇ ಆಕ್ಷೇಪ ಎತ್ತಿದ್ದರು.
ಕೊನೆಗೆ ಇದನ್ನು ಖಂಡಿಸುವುದಾಗಿ ಪ್ರಕಟಣೆ ಹೊರಡಿಸಿದ ಎಎಂಯು ಆಡಳಿತ ಮಂಡಳಿ ಜಿತೇಂದ್ರ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿದೆ. ಪ್ರೊಫೆಸರ್ ಹೇಳಿಕೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ವಿವಿ ಸಿಬ್ಬಂದಿಯ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಈ ಬಗ್ಗೆ 24 ಗಂಟೆಗಳೊಳಗೆ ಸೂಕ್ತ ಕಾರಣ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಅಮಾನತುಗೊಂಡಿರುವ ಜಿತೇಂದ್ರ ಕುಮಾರ್, ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೋಕಾಸ್ ನೋಟಿಸ್ ಗೆ ಉತ್ತರಿಸಿರುವ ಅವರು ಈ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಪ್ರಮಾದ ಆಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ.