ಮನೆಯಲ್ಲಿ ದೇವರ ಪೂಜೆಗೆ ಎಂದು ಒಂದಷ್ಟು ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿರುತ್ತೇವೆ. ಆದರೆ ಇವು ದಿನಕಳೆದಂತೆ ಕಪ್ಪಾಗುವುದಕ್ಕೆ ಶುರುವಾಗುತ್ತದೆ.
ಅದು ಅಲ್ಲದೇ ಹಬ್ಬ ಹರಿದಿನಗಳು ಬಂತೆಂದರೆ ಈ ಸಾಮಾನುಗಳನ್ನು ಕ್ಲೀನ್ ಮಾಡುವುದೇ ಒಂದು ದೊಡ್ಡ ತಲೆನೋವಾಗಿ ಕಾಡುತ್ತದೆ. ಕಪ್ಪಾದ ಬೆಳ್ಳಿ ಪಾತ್ರಗಳು ಮಿರ ಮಿರ ಮಿಂಚಲು ಈ ಟಿಪ್ಸ್ ಒಮ್ಮೆ ಫಾಲೋ ಮಾಡಿನೋಡಿ.
*ಒಂದು ಪಾತ್ರೆಗೆ ನಿಮ್ಮಲ್ಲಿರುವ ಬೆಳ್ಳಿ ಪಾತ್ರೆ ಮುಳುಗುವಷ್ಟು ನೀರು ಹಾಕಿ. ನೀರು ಕುದಿಯಲು ಆರಂಭಿಸಿದಾಗ ಅಲ್ಯುಮಿನಿಯಂ ಶೀಟ್ ಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದನ್ನು ನೀರಿಗೆ ಹಾಕಿ. ಇವೆಲ್ಲವೂ ಕುದಿಯಲು ಶುರುಮಾಡಿದಾಗ ಇದಕ್ಕೆ ಬೆಳ್ಳಿ ವಸ್ತುಗಳನ್ನು ಹಾಕಿ. ಅದೇ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ, 2 ಚಮಚ ಡಿಟರ್ಜೆಂಟ್ ಪೌಡರ್ ಹಾಕಿ 10 ನಿಮಿಷ ಕುದಿಸಿ, ನಂತರ ನೀರಿನಿಂದ ಬೆಳ್ಳಿ ಸಾಮಾನುಗಳನ್ನು ನಿಧಾನಕ್ಕೆ ಎತ್ತಿಕೊಂಡು ಇನ್ನೊಂದು ಶುದ್ಧವಾದ ನೀರಿನ ಪಾತ್ರೆಗೆ ಹಾಕಿ. ಚೆನ್ನಾಗಿ ತೊಳೆಯಿರಿ. ಆಮೇಲೆ ಒಂದು ಶುದ್ಧವಾದ ಬಟ್ಟೆಯಿಂದ ನೀರಿನ ಪಸೆ ಇರದಂತೆ ಒರೆಸಿ.
*ಇನ್ನು ನೀವು ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ನಿಂದ ಕೂಡ ಬೆಳ್ಳಿಯ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಮೊದಲಿಗೆ ಪಾತ್ರೆಗೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ ನಂತರ ಒಂದು ಟೂತ್ ಬ್ರೆಷ್ ಗೆ ಸ್ವಲ್ಪ ಸ್ವಲ್ಪವೇ ಟೂತ್ ಪೇಸ್ಟ್ ಹಾಕಿಕೊಂಡು ಅದರಿಂದ ಬೆಳ್ಳಿಯ ಸಾಮಾಗ್ರಿಗಳನ್ನು ಚೆನ್ನಾಗಿ ತಿಕ್ಕಿ. ನಂತರ ನೀರಿನಿಂದ ತೊಳೆದು ಒಣಗಿದ ಬಟ್ಟೆಯಿಂದ ಒರೆಸಿದರೆ ಬೆಳ್ಳಿಯ ಪಾತ್ರೆ ಹೊಳೆಯುತ್ತದೆ.