ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 4ರಂದು ಚೀನಾಕ್ಕೆ ಭೇಟಿ ನೀಡಿದ್ದರು. ಕ್ರೀಡಾಪಟುಗಳ ಮೆರವಣಿಗೆಯ ಸಮಯದಲ್ಲಿ ನಿದ್ರಿಸುತ್ತಿರುವಂತೆ ಕಾಣಿಸಿಕೊಂಡ ನಂತರ ಪುಟಿನ್ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಉಕ್ರೇನಿಯನ್ ಅಥ್ಲೀಟ್‌ಗಳು ಬೀಜಿಂಗ್‌ನ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಮೆರವಣಿಗೆ ನಡೆಸುತ್ತಿರುವಾಗ ಕ್ಯಾಮರಾಗಳು ರಷ್ಯಾದ ನಾಯಕನನ್ನು ಸೆರೆಹಿಡಿದಿವೆ. ಈ ವೇಳೆ ಪುಟಿನ್ ಕಣ್ಣು ಮುಚ್ಚಿರುವಂತೆ ಕಂಡುಬಂದಿದೆ. ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ವೈರಲ್ ಆಗ್ತಿದ್ದು ಮೀಮ್‌ಗಳ ಕೋಲಾಹಲವನ್ನೇ ಸೃಷ್ಟಿಸಿದೆ.
ಪುಟಿನ್ ಸ್ವಲ್ಪ ಸಮಯದವರೆಗೆ ಕಣ್ಣು ಮುಚ್ಚಿ ಕುರ್ಚಿಯ ಮೇಲೆ ಕುಳಿತಿರುವುದನ್ನು ದೃಶ್ಯಾವಳಿ ತೋರಿಸುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ ಪುಟಿನ್ ಅವರ ನಿದ್ರಾಭಂಗಿ ನೆಟ್ಟಿಗರ ಗಮನ ಸೆಳೆದಿದ್ದಂತೂ ಸುಳ್ಳಲ್ಲ. ತನ್ನ ಪ್ರತಿಸ್ಪರ್ಧಿ ದೇಶವನ್ನು ನೋಡಿ ನಿದ್ದೆ ಮಾಡುತ್ತಿದ್ದಾರೆ ಎಂಬುದಾಗಿ ಹಲವರು ಊಹಿಸಿದ್ದಾರೆ.
ಚಳಿಗಾಲದ ಕ್ರೀಡಾಕೂಟದಲ್ಲಿ ರಷ್ಯಾ ಅನುಪಸ್ಥಿತಿಯ ಹೊರತಾಗಿಯೂ ಪುಟಿನ್ ಚೀನಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ವ್ಯಾಪಕವಾದ ಡೋಪಿಂಗ್ ಉಲ್ಲಂಘನೆಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮುಂಚಿತವಾಗಿಯೇ ರಷ್ಯಾದ ಮೇಲೆ 4 ವರ್ಷಗಳ ಒಲಿಂಪಿಕ್ ನಿಷೇಧವನ್ನು ವಿಧಿಸಿದೆ.