
ಬೆಂಗಳೂರಿನಲ್ಲಿ ಇತ್ತೀಚೆಗೆ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಎಂಬ ಯುವಕನ ಹತ್ಯೆಯಾಗಿದ್ದು, ಆತ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಆದರೆ ಬಳಿಕ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್, ಭಾಷೆಯ ವಿಚಾರಕ್ಕೆ ಈ ಹತ್ಯೆ ನಡೆದಿಲ್ಲ. ಬದಲಾಗಿ ಬೈಕ್ ಡಿಕ್ಕಿ ಹೊಡೆದ ಕಾರಣ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದಿದ್ದರು.
ಉರ್ದು ಮಾತನಾಡದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಮೊದಲಿಗೆ ಹೇಳಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಮೀಷನರ್ ಹೇಳಿಕೆ ಬಳಿಕ ತಮ್ಮ ಮಾತನ್ನು ಹಿಂಪಡೆದುಕೊಂಡು ಅಪಘಾತದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದಿದ್ದರು. ಇಷ್ಟಾದರೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಮೀಷನರ್ ಸುಳ್ಳು ಹೇಳುತ್ತಿದ್ದಾರೆ. ಉರ್ದು ಮಾತನಾಡಲಿಲ್ಲವೆಂಬ ಕಾರಣಕ್ಕೇ ಚಂದ್ರು ಹತ್ಯೆ ನಡೆದಿದೆ ಎಂದು ಪ್ರತಿಪಾದಿಸಿದ್ದರು.
ಇದೀಗ ಮಾಜಿ ಪೊಲೀಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಸುಳ್ಳು ಹೇಳುತ್ತಿದ್ದಾರೆ ಎಂದು ರಾಜಕೀಯ ನಾಯಕರು ಹೇಳುತ್ತಿರುವುದು ಸಿಎಂ ಹಾಗೂ ಸರ್ಕಾರಕ್ಕೆ ಮಾಡುತ್ತಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಬೆಂಗಳೂರು ಪೊಲೀಸ್ ಕಮೀಷನರ್ ಎಂದರೆ 1.5 ಕೋಟಿ ನಾಗರಿಕರನ್ನು ರಕ್ಷಿಸುವ ಸಂಸ್ಥೆಯಿದ್ದಂತೆ ಎಂದು ಅವರು ತಿಳಿಸಿದ್ದಾರೆ.