ಬೆಂಗಳೂರು: ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಡಿ. 31ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಬಂದ್ ಕುರಿತು ಹೇಳುವ ಸಮಯದಲ್ಲಿ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಬಂದ್ ಘೋಷಿಸುವ ವಿಷಯವಾಗಿ ನಗರದಲ್ಲಿನ ಖಾಸಗಿ ಹೊಟೇಲ್ ಒಂದರಲ್ಲಿ ಸಭೆ ಜರುಗಿತ್ತು. ಈ ಸಂದರ್ಭದಲ್ಲಿ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ, ಸಾರಾ ಗೋವಿಂದು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು.
ಅಪಹರಣದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಜಿಗಿದ ಯುವತಿ..!
ಆಗ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರವು ಎಂಇಎಸ್ ನ ಪುಂಡತನ ತಡೆಗಟ್ಟಬೇಕಾದರೆ, ಅದನ್ನು ನಿಷೇಧಿಸಬೇಕು. ಈ ಕುರಿತು ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ಇಲ್ಲವಾದಲ್ಲಿ ಡಿ.31ಕ್ಕೆ ಇಡೀ ಕರ್ನಾಟಕ ಬಂದ್ ಆಗಲಿದೆ ಎಂದು ಹೇಳುತ್ತಿದ್ದಂತೆ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್ ನಾಯಕ್ ತಗಾದೆ ತೆಗೆದಿದ್ದು, ಬಂದ್ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಇದಕ್ಕೆ ಅಲ್ಲಿದ್ದ ಮುಖಂಡರು ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.