“ಇವತ್ತು ನೀನು ಮಾಡಿರೋ ಸಾಂಬಾರ್ ಸೂಪರ್ ಆಗಿದೆ”
“ನಿನ್ನ ಕೈ ಬರಹ ಬಹಳ ಚೆನ್ನಾಗಿದೆ”
“ಎಷ್ಟು ಚೆನ್ನಾಗಿ ಡಾನ್ಸ್ ಮಾಡ್ತೀಯಾ, ವೆರಿ ಗುಡ್, ಕೀಪ್ ಇಟ್ ಅಪ್”
ಇಂತಹ ಪುಟ್ಟ ಪುಟ್ಟ ಪ್ರಶಂಸೆಗಳು ನಮ್ಮ ಬದುಕಿನ ದಿಸೆಯನ್ನೆ ಬದಲಿಸಿಬಿಡುತ್ತದೆ. ಪ್ರಶಂಸೆ ಪ್ರೋತ್ಸಾಹದ ಇನ್ನೊಂದು ಮುಖ. ಯಾರಿಗಾದರೂ ಸೂಕ್ತ ಸಂದರ್ಭದಲ್ಲಿ, ಸರಿಯಾದ ವ್ಯಕ್ತಿಗಳು ಪ್ರೋತ್ಸಾಹದ, ಪ್ರಶಂಸೆಯ ಮಾತುಗಳನ್ನು ಆಡಿದರೆ ಅವರ ಎನರ್ಜಿ ಲೆವೆಲ್ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಮಕ್ಕಳಿಂದ ದೊಡ್ಡವರವರೆಗೂ, ಮನೆಯಿಂದ ಕಚೇರಿಯವರೆಗೂ ಎಲ್ಲರೂ ತಮ್ಮ ಶ್ರಮಕ್ಕೆ ಪ್ರತಿಯಾಗಿ ಕೆಲವು ಮೆಚ್ಚುಗೆಯ ಮಾತುಗಳನ್ನು ಎದುರುನೋಡುವುದು ಸಹಜ. ಪ್ರಶಂಸೆ ಎನ್ನುವುದು ನಮ್ಮ ಆತ್ಮವಿಶ್ವಾಸದ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮತ್ತಷ್ಟು ಹಾರ್ಡ್ ವರ್ಕ್ ಮಾಡುವುದಕ್ಕೆ ಪ್ರೇರೇಪಿಸುತ್ತದೆ.
ಯಾವುದೇ ಒಳ್ಳೆಯ ವಿಷಯ ನಮ್ಮ ಗಮನಕ್ಕೆ ಬಂದಾಗ ತಕ್ಷಣವೇ ಒಂದು ಚಿಕ್ಕ ಪ್ರಶಂಸೆ ಕೊಡಲು ಮರೆಯದಿರಿ. ಮಕ್ಕಳಿಗೆ ತಮ್ಮ ಓದಿನಲ್ಲಿ, ಹೆಂಡತಿಗೆ ತನ್ನ ಗೃಹ ಕೃತ್ಯಗಳಲ್ಲಿ, ಕಛೇರಿಯಲ್ಲಿ ಸಹೋದ್ಯೋಗಿಗಳ ಕೆಲಸದಲ್ಲಿ ಹೀಗೆ ಎಲ್ಲಾ ಕಡೆಗಳಲ್ಲೂ ಪ್ರೋತ್ಸಾಹ ಎನ್ನುವುದು ಜಾದೂ ಸೃಷ್ಟಿಸುತ್ತದೆ. ನಮ್ಮ ಒಂದು ಮೆಚ್ಚುಗೆಯ ಮಾತು ಬಹುಶಃ ನಮ್ಮವರ ಶ್ರಮದ ಆಯಾಸವನ್ನೆಲ್ಲಾ ಪರಿಹರಿಸಿಬಿಡಬಹುದು.