
ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಪ್ರವೇಶಿಸಲು ಆನ್ಲೈನ್ನಲ್ಲಿ ಖರೀದಿ ಮಾಡುವ ಟಿಕೆಟ್ ದರವು 100 ರೂಪಾಯಿ ಆಗಿದೆ. ಆಫ್ಲೈನ್ನಲ್ಲಿ 110 ರೂಪಾಯಿ ನೀಡಿ ಟಿಕೆಟ್ ಖರೀದಿಸಬಹುದು. ವಿದೇಶಿಗರು 750 ರೂಪಾಯಿ ನೀಡಿ ಟಿಕೆಟ್ ಖರೀದಿಸಬೇಕು. 5 ರಿಂದ 12 ವರ್ಷದೊಳಗಿನ ಮಕ್ಕಳ ಆನ್ಲೈನ್ ಅಥವಾ ಆಫ್ಲೈನ್ ಟಿಕೆಟ್ ಖರೀದಿಗೆ 50 ಪ್ರತಿಶತ ರಿಯಾಯಿತಿ ಸಿಗಲಿದೆ.
“ಪ್ರಧಾನಮಂತ್ರಿ ಸಂಗ್ರಹಾಲಯ”ಕ್ಕೆ ಹತ್ತಿರದ ಮೆಟ್ರೋ ನಿಲ್ದಾಣವು ಹಳದಿ ಮಾರ್ಗದಲ್ಲಿರುವ ಲೋಕ್ ಕಲ್ಯಾಣ್ ಮಾರ್ಗವಾಗಿದೆ. ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಂದ ಬುಕಿಂಗ್‌ನಲ್ಲಿ ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ.
ಸಂಗ್ರಹಾಲಯವು ಪಿಎಂ ಮೋದಿ ನೇತೃತ್ವದ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನವಾಗಿದೆ, ಇದು ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಪಿಎಂಒ ಮಾಹಿತಿ ನೀಡಿದೆ.
ಈ ಸಂಗ್ರಹಾಲಯವು 10 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, ನೆಹರು ಮೆಮೋರಿಯಲ್ ಮ್ಯೂಸಿಯಂ ಪಕ್ಕದಲ್ಲಿದ್ದು, ತೀನ್ ಮೂರ್ತಿ ಭವನದಲ್ಲಿರುವ ಲೈಬ್ರರಿಯೂ ಸನಿಹದಲ್ಲಿದೆ.
ಈ ಕಟ್ಟಡ ನಿರ್ಮಾಣಕ್ಕೆ 2018 ರಲ್ಲಿ ಶಂಕುಸ್ಥಾನನೆ ನೆರವೇರಿಸಲಾಗಿದ್ದು, ಸುಮಾರು 271 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳಿವೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನದಂದೇ ಈ ಸಂಗ್ರಹಾಲಯ ಉದ್ಘಾಟನೆಯಾಗಿರುವುದು ವಿಶೇಷ.