ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕೇಂದ್ರ ಸರ್ಕಾರಿ ನೌಕರರಿಗೆ ಅತ್ಯಂತ ಪ್ರಯೋಜನಕಾರಿಯಾದ ಸರ್ಕಾರಿ ಸ್ಕೀಮ್ ಗಳಲ್ಲೊಂದು. ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್ ಪಿ ಎಸ್ ಖಾತೆಯನ್ನು ತೆರೆಯಬೇಕು.
2013ರ PFRDA ಕಾಯ್ದೆ ಅಡಿಯಲ್ಲಿ ಇದನ್ನು ನಿಯಂತ್ರಿಸಲಾಗುತ್ತದೆ. ಹಣಕಾಸು ಸೇವೆಗಳ ಇಲಾಖೆ ಸಹ ಇದರ ನೀತಿ ನಿಯಮಗಳನ್ನು ರೂಪಿಸುತ್ತದೆ. ಸೇವೆಗೆ ಸೇರ್ಪಡೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರ ಹೆಸರಲ್ಲಿ ಎನ್ ಪಿ ಎಸ್ ಖಾತೆ ತೆರೆಯಲಾಗುತ್ತದೆ.
ಇದಕ್ಕಾಗಿ DDO ಹಾಗೂ PAOಗೆ ಅರ್ಜಿ ಸಲ್ಲಿಸಬೇಕು. ಎನ್ ಪಿ ಎಸ್ ಗೆ ಸೇರ್ಪಡೆಯಾದ ಬಳಿಕ ನೌಕರರಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ ಲಭ್ಯವಾಗುತ್ತದೆ. ಎನ್ ಪಿ ಎಸ್ ಮೊಬೈಲ್ ಅಪ್ಲಿಕೇಶನ್ ಹಾಗೂ ಆನ್ ಲೈನ್ ನಲ್ಲಿ ನೌಕರರು ವಹಿವಾಟು ನಡೆಸಬಹುದಾಗಿದೆ.
ಟೈರ್ 1 ನಲ್ಲಿ ನೌಕರರು ಕನಿಷ್ಟ ಶೇ.10 ರಷ್ಟು ವೇತನವನ್ನು ಕಡ್ಡಾಯವಾಗಿ ಹೂಡಿಕೆ ಮಾಡಬೇಕೆಂಬ ನಿಯಮವಿದೆ. ಇಚ್ಛಿಸಿದಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕೂಡ ಹೂಡಿಕೆ ಮಾಡಬಹುದು. ತಮಗಿಷ್ಟವಾದ ಹೂಡಿಕೆ ಮಾದರಿ ಹಾಗೂ ಪಿಂಚಣಿ ನಿಧಿಯನ್ನು ನೌಕರರು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ನಿವೃತ್ತಿ ಬಳಿಕ ಅಥವಾ 60 ವರ್ಷದ ನಂತರ ನೌಕರರು ಎನ್ ಪಿ ಎಸ್ ನಿಂದ ನಿರ್ಗಮಿಸಬಹುದು. ಮೊದಲು ಸಹ ನಿಯಮಾವಳಿಗೆ ಅನುಸಾರವಾಗಿ ನಿರ್ಗಮಿಸಲು ಅವಕಾಶವಿದೆ.
ಚಂದಾದಾರರು 60 ವರ್ಷಕ್ಕಿಂತ ಮೊದಲು ನಿರ್ಗಮಿಸಿದರೆ ಸಂಚಿತ ಬ್ಯಾಲೆನ್ಸ್ ನಲ್ಲಿ ಶೇ.80 ರಷ್ಟನ್ನು ಹೂಡಿಕೆ ಮಾಡಬೇಕು. ಉಳಿದ ಶೇ.20 ರಷ್ಟನ್ನು ಒಟ್ಟು ಮೊತ್ತವಾಗಿ ಹಿಂಪಡೆಯಬಹುದು. 60 ವರ್ಷದ ಬಳಿಕ ಎನ್ ಪಿ ಎಸ್ ನಿಂದ ನಿರ್ಗಮಿಸಿದರೆ ಶೇ.40 ರಷ್ಟನ್ನು ಹೂಡಿಕೆ ಮಾಡಿ, ಉಳಿದ 60ರಷ್ಟು ಹಣವನ್ನು ಬಳಿಕ ಪಡೆಯಲು ಅವಕಾಶವಿದೆ.
ಈ ಯೋಜನೆ ಅಡಿಯಲ್ಲಿ ಉದ್ಯೋಗಿ, ಆತನ ಸಂಗಾತಿ ಅಥವಾ ಅವಲಂಬಿತ ಪೋಷಕರಿಗೆ ಜೀವಿತಾವಧಿಯಲ್ಲಿ ಪಿಂಚಣಿ ದೊರೆಯುತ್ತದೆ. ಶೇ.25ರಷ್ಟು ಹಣವನ್ನು ಭಾಗಶಃ ಹಿಂತೆಗೆದುಕೊಳ್ಳಲು ಸಹ ಅವಕಾಶವಿದೆ. ಮಕ್ಕಳ ಶಿಕ್ಷಣ, ಮದುವೆ, ಅನಾರೋಗ್ಯಕ್ಕೆ ಸಂಬಂಧಪಟ್ಟ ಚಿಕಿತ್ಸೆಗೆ, ಕಟ್ಟಡ ನಿರ್ಮಾಣ, ಮನೆ ನಿರ್ಮಾಣಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು. ಚಂದಾದಾರರಾಗಿ ಮೂರು ವರ್ಷಗಳ ಬಳಿಕ ಭಾಗಶಃ ಹಿಂತೆಗೆದುಕೊಳ್ಳಬಹುದು.