ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ಕಡೆಯ ದಿನಾಂಕವನ್ನೂ ನಿಗದಿ ಮಾಡಿತ್ತು. ಸಾರ್ವಜನಿಕರು ಜೂನ್ 30 ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂದು ಗಡುವು ವಿಧಿಸಲಾಗಿತ್ತು. ಆದಾಗ್ಯೂ ಈವರೆಗೂ ನಿಮ್ಮ ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ಕೆಲವು ಹಣಕಾಸಿನ ವಹಿವಾಟಿಗೆ ಪಾನ್ ನಂಬರ್ ಬಳಸಲು ಸಾಧ್ಯವಾಗುವುದಿಲ್ಲ.
ಸರ್ಕಾರ ಕೂಡ ಗಡುವನ್ನು ವಿಸ್ತರಿಸಲಿಲ್ಲ. ಲಿಂಕ್ ಮಾಡದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ಈಗಾಗಲೇ ನಿಷ್ಕ್ರಿಯವಾಗಿರುತ್ತದೆ. ಅದನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ ಎಂಬ ವಿವರಗಳನ್ನು ನೋಡೋಣ.
1000 ರೂಪಾಯಿ ಪಾವತಿಸಿದ ನಂತರ, ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಅನ್ನು ವರದಿ ಮಾಡಿ 30 ದಿನಗಳಲ್ಲಿ ಪಾನ್ ಅನ್ನು ಮರು-ಸಕ್ರಿಯಗೊಳಿಸಬಹುದು. ಆದಾಯ ತೆರಿಗೆ ನಿಯಮ 114AAA ಪ್ರಕಾರ, ಒಬ್ಬ ವ್ಯಕ್ತಿಯ ಪಾನ್ ನಿಷ್ಕ್ರಿಯವಾಗಿದ್ದರೆ ಅಂತಹ ವೈಫಲ್ಯಕ್ಕಾಗಿ ಕಾಯಿದೆಯ ಅಡಿಯಲ್ಲಿ ಎಲ್ಲಾ ಪರಿಣಾಮಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ.
ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಆ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಬಾಕಿ ಇರುವ ರಿಟರ್ನ್‌ಗಳನ್ನು ಸಲ್ಲಿಸುವುದು ಕೂಡ ಅಸಾಧ್ಯ. ನಿಷ್ಕ್ರಿಯ PAN ನಲ್ಲಿ ಬಾಕಿ ಉಳಿದಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. PAN ನಿಷ್ಕ್ರಿಯಗೊಂಡಾಗ ದೋಷಪೂರಿತ ರಿಟರ್ನ್‌ಗಳ ಸಂದರ್ಭದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ. ಪಾನ್ ನಿಷ್ಕ್ರಿಯಗೊಂಡರೆ ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.