ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಕುರಿತಂತೆ ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದ ಮಾತ್ರಕ್ಕೆ ಅದು ಸಹಮತದಿಂದ ನಡೆದ ಸಂಭೋಗವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ.
ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಿಳೆ ಅತ್ಯಾಚಾರವನ್ನು ವಿರೋಧಿಸಿಲ್ಲ ಎಂದ ಮಾತ್ರಕ್ಕೆ ಅದು ಒಪ್ಪಿಗೆಯಿಂದ ನಡೆದಿದ್ದು ಮತ್ತು ಶಿಕ್ಷಾರ್ಹವಲ್ಲ ಎಂದು ಅರ್ಥವಲ್ಲ ಅಂತಾ ಕೋರ್ಟ್ ಹೇಳಿದೆ. ಸಂತ್ರಸ್ತೆಯ ಹೇಳಿಕೆಗಳು ನ್ಯಾಯಾಲಯವು ನಂಬಲರ್ಹವೆಂದು ಕಂಡುಬಂದರೆ, ಆಕೆಯ ಮೇಲೆ ನಡೆದಿರುವ ಕೃತ್ಯ ಸಹಮತದ್ದಲ್ಲ ಎಂದೇ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
2015ರಲ್ಲಿ ಮಹಿಳೆಯೊಬ್ಬರನ್ನು ಕೋಣೆಯೊಳಗೆ ಎಳೆದೊಯ್ದು, ನೆಲದ ಮೇಲೆ ಕೆಡವಿ ಅತ್ಯಾಚಾರ ಎಸಗಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ಹೇಳಿಕೆ ನ್ಯಾಯಾಲಯಕ್ಕೆ ವಿಶ್ವಾಸಾರ್ಹವೆಂದು ಕಂಡುಬಂದರೆ ಅದನ್ನು ಇಬ್ಬರು ವಯಸ್ಕರ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆಯೆಂದು ಕರೆಯಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಕೋರ್ಟ್ ಹೇಳಿದೆ.
ತೀರ್ಪನ್ನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎ.ಎಮ್. ಬದರ್, ಐಪಿಸಿ ಸೆಕ್ಷನ್ 375ನ್ನು ಪ್ರಸ್ತಾಪಿಸಿದ್ರು. ಮಹಿಳೆಯು ದೈಹಿಕ ಬಲಪ್ರಯೋಗವನ್ನು ವಿರೋಧಿಸಲು ಸಾಧ್ಯವಾಗಿಲ್ಲ ಎಂದ ಮಾತ್ರಕ್ಕೆ ಅದನ್ನು ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ ಎಂದರು. ಜಮುಯಿ ಗ್ರಾಮದ ಇಟ್ಟಿಗೆ ಗೂಡುಗಳಲ್ಲಿ ದಿನಗೂಲಿ ಕಾರ್ಮಿಕಳಾಗಿದ್ದ ಮಹಿಳೆಯ ಮನೆಗೇ ನುಗ್ಗಿದ ದುಷ್ಟರು, ಕೂಗಿಕೊಳ್ಳದಂತೆ ಆಕೆಯ ಬಾಯಿ ಬಂದ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು.