
ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ.
ಹೌದು, ಪ್ರತಿದಿನ ಮೂರು ನಿಮಿಷಗಳ ಕಾಲ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡುವುದರಿಂದ ದೃಷ್ಟಿ ಸಮಸ್ಯೆ ಸುಧಾರಣೆ ಆಗಲಿದೆ ಎನ್ನುತ್ತದೆ ಈ ಅಧ್ಯಯನ. 40 ರ ಗಡಿ ಕಳೆದ ಬಳಿಕ ರೆಟಿನಾದ ಜೀವಕೋಶಗಳ ಶಕ್ತಿ ಕುಂದುತ್ತದೆ. ಗಾಢ ಕೆಂಪು ಬಣ್ಣದ ಬೆಳಕು ಚೆಲ್ಲಿದಾಗ ಅವು ರೆಟಿನಾಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುತ್ತದೆ.
ಈ ಸಂಶೋಧನೆಯಲ್ಲಿ 28 – 72 ವಯಸ್ಸಿನ ಮಂದಿಯ ಮೇಲೆ ಪ್ರಯೋಗ ನಡೆಸಲಾಗಿತ್ತು. ಎಲ್ಇಡಿ ಟಾರ್ಚ್ ಮೂಲಕ ದಿನಕ್ಕೆ ಮೂರು ನಿಮಿಷಗಳ ಕಾಲ 670 ಎನ್ ಎಂ ಬೆಳಕಿನ ಕಿರಣಗಳನ್ನು ದಿಟ್ಟಿಸುವಂತೆ ಸೂಚಿಸಲಾಗಿತ್ತು. 40 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಇದು ಸಕಾರಾತ್ಮಕವಾಗಿ ಪ್ರಭಾವ ಬೀರಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.