ಮುಂಬೈ: ದಿ ಕಾಶ್ಮೀರ್ ಫೈಲ್ಸ್‌ನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂದರ್ಶನವೊಂದರಲ್ಲಿ ಭೋಪಾಲಿಗಳನ್ನು ಸಾಮಾನ್ಯವಾಗಿ ಸಲಿಂಗಕಾಮಿಗಳಾಗಿ ಭಾವಿಸಲಾಗುತ್ತದೆ ಎಂಬ ಹೇಳಿಕೆಯಿಂದ ಅವರ ವಿರುದ್ಧ ದೂರು ನೀಡಲಾಗಿದೆ.
ರೋಹಿತ್ ಪಾಂಡೆ ಎಂಬ 27 ವರ್ಷದ ಪಿಆರ್ ಮ್ಯಾನೇಜರ್ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಾರರು ಮಧ್ಯಪ್ರದೇಶದ ಭೋಪಾಲ್ ಮೂಲದವರಾಗಿದ್ದು, ಈ ವಿಚಾರದಲ್ಲಿ ತುರ್ತಾಗಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.
ಸಂದರ್ಶನವೊಂದರಲ್ಲಿ ವಿವೇಕ್ ಅಗ್ನಿಹೋತ್ರಿ, ಭೋಪಾಲಿಗಳು ತಮ್ಮ ನವಾಬಿ ಆಸೆಗಳಿಂದಾಗಿ ಸಲಿಂಗಕಾಮಿಗಳು ಎಂಬಂತೆ ಭಾವಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಂದರ್ಶನದ ಕ್ಲಿಪ್ ವೈರಲ್ ಆದ ನಂತರ ಕಾಶ್ಮೀರ ಫೈಲ್ಸ್ ನಿರ್ದೇಶಕರು ತಮ್ಮ ಹೇಳಿಕೆಗಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಸಂದರ್ಶನದಲ್ಲಿ ಅವರು, ತಾನು ಭೋಪಾಲ್ ಮೂಲದವನು. ಆದರೆ, ತನ್ನನ್ನು ಭೋಪಾಲಿ ಎಂದು ಕರೆಯುವುದಿಲ್ಲ. ಏಕೆಂದರೆ ಅದು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ. ಯಾರಾದರೂ ತನ್ನನ್ನು ಭೋಪಾಲಿ ಎಂದು ಕರೆದರೆ, ಅದು ಸಾಮಾನ್ಯವಾಗಿ ಆ ವ್ಯಕ್ತಿಯು ಸಲಿಂಗಕಾಮಿ ಎಂಬ ಅರ್ಥ ಬರುತ್ತದೆ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.