ದೇಶದ ರಾಜಕೀಯ ಕ್ಷೇತ್ರದಲ್ಲಿ ಹಾಗೂ ಚಲನಚಿತ್ರ ರಂಗದಲ್ಲೂ ಬಿರುಗಾಳಿ ಎಬ್ಬಿಸಿದ ದಿ ಕಾಶ್ಮೀರ್ ಫೈಲ್ಸ್ ತಂಡ ಸಾಗರದಾಚೆಗೂ ಸದ್ದು ಮಾಡುತ್ತಿದೆ. 1990ರಲ್ಲಿ ಕಾಶ್ಮೀರ ಕಣಿವೆಯಿಂದ ಪಂಡಿತರ ವಲಸೆಯನ್ನು ಆಧರಿಸಿ ರೂಪುಗೊಂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಕಂಡಿದೆ.
ಇದೀಗ ಕಾಶ್ಮೀರಿ ಪಂಡಿತರ ಸಂಕಷ್ಟದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಮಾತನಾಡಲು ಚಿತ್ರ ತಂಡ ತೆರಳುತ್ತಿದೆ. ಮುಂದಿನ ತಿಂಗಳು ಅಲ್ಲಿಗೆ ತೆರಳುತ್ತಿರುವುದಾಗಿ ಚಿತ್ರತಂಡ ಸ್ಪಷ್ಟಪಡಿಸಿದೆ.
ಕಾಶ್ಮೀರ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯುವ ಉದ್ದೇಶದಿಂದ ಕಾಶ್ಮೀರ ಫೈಲ್ಸ್ ಚಿತ್ರ ಸಿದ್ಧಪಡಿಸಲಾಗಿದೆ. ನಾವು ಅಲ್ಲಿಗೆ ಬರುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಪೋರ್ಟಲ್ ಒಂದಕ್ಕೆ ತಿಳಿಸಿದ್ದರು.
ಯು.ಕೆ.ಯಲ್ಲಿರುವ ಸಂಸತ್ತು ಮತ್ತು ಭಾರತೀಯ ಸಮುದಾಯ ಇಬ್ಬರೂ ಇಲ್ಲಿ ತಮ್ಮ ಪ್ರವಾಸಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅನೇಕ ಪ್ರಮುಖ ಸಂಸದರು ಮತ್ತು ಕೈಗಾರಿಕೋದ್ಯಮಿಗಳು ಇಲ್ಲಿ ಈಗಾಗಲೇ ಚಲನಚಿತ್ರವನ್ನು ನೋಡಿದ್ದಾಗಿ ತಿಳಿಸುತ್ತಿದ್ದಾರೆಂದು ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 11 ರಂದು ಬಿಡುಗಡೆಯಾದ ಚಿತ್ರವು ಮಂಗಳವಾರ, ಮಾರ್ಚ್ 29 ರವರೆಗೆ ಬಾಕ್ಸ್ ಆಫೀಸ್‌ನಲ್ಲಿ 234 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡಿದ ನಂತರ ‘ದಿ ಕಾಶ್ಮೀರ ಫೈಲ್ಸ್’ ಇನ್ನಷ್ಟು ಚರ್ಚೆಗೆ ಒಳಗಾಯಿತು.
ಉತ್ತರ ಪ್ರದೇಶ, ತ್ರಿಪುರಾ, ಗೋವಾ ಸೇರಿ ಹಲವು ಬಿಜೆಪಿ ನೇತೃತ್ವದ ರಾಜ್ಯಗಳಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಿರುವುದರಿಂದ ರಾಜಕೀಯ ಲಾಭಕ್ಕಾಗಿ ಚಲನಚಿತ್ರವನ್ನು ಬಳಸಲಾಗುತ್ತಿದೆ ಎಂಬ ಟೀಕೆಯೂ ಕೇಳಿಬಂತು.