ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಸಿನಿಮಾ ಥಿಯೇಟರ್ ಗೆ ನಿಧಾನವಾಗಿ ಹೋಗಲು ಶುರು ಮಾಡಿದ್ದಾರೆ. ಬಾಲಿವುಡ್ ನ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಪ್ರೇಕ್ಷಕರನ್ನ ಹೆಚ್ಚು ಸೆಳೆದಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೋವು ಮತ್ತು ಸಂಕಟವನ್ನು ಸಿನಿಮಾ ಮೂಲಕ ತೋರಿಸುವ ಪ್ರಯತ್ನ ನಡೆಸಿದ್ದಾರೆ. ಚಿತ್ರದ ಬೇಡಿಕೆ ಹೆಚ್ಚಿದ ನಂತರ 2000 ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. 14 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಕೇವಲ ಮೂರು ದಿನಗಳಲ್ಲಿ 25.5 ಕೋಟಿ ಕಲೆಕ್ಷನ್ ಮಾಡಿದೆ.
ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಯಾದ್ರೂ ಇತ್ತೀಚಿನ ದಿನಗಳಲ್ಲಿ ಒಟಿಟಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಜನರು ತಮ್ಮಿಷ್ಟದ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಕಾತುರರಾಗಿರ್ತಾರೆ. ಅವರಿಗೆ ಖುಷಿ ಸುದ್ದಿಯೊಂದಿದೆ. ದಿ ಕಾಶ್ಮೀರ್ ಫೈಲ್ಸ್ ಒಟಿಟಿಯಲ್ಲಿಯೂ ಬಿಡುಗಡೆಯಾಗಲಿದೆ. ಝೀ 5ನಲ್ಲಿ ಚಿತ್ರ ಬಿಡುಗಡೆಯಾಗುವುದು ಖಚಿತವಾಗಿದೆ. ಆದ್ರೆ ಚಿತ್ರ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಒಂದು ತಿಂಗಳೊಳಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್, ಕಂಗನಾ ರನೌತ್, ಆರ್ ಮಾಧವನ್, ಪರಿಣಿತಿ ಚೋಪ್ರಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.