ಶಾಲೆಗಳಿಗೆ ರಜೆ ಕೊಟ್ಟರೆ ಮಕ್ಕಳಿಗೆ ಖುಷಿಯೋ ಖುಷಿ. ವಾರವಿಡೀ ಸ್ಕೂಲ್ ಬಂದ್ ಆಗಿದ್ದರೂ ವಿದ್ಯಾರ್ಥಿಗಳಿಗೇನು ಬೇಸರವಿಲ್ಲ. ಆದ್ರೆ ಕೇರಳದ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ರಜೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಮತ್ತೆ ಶಾಲೆಗೆ ರಜೆ ಕೊಡಬೇಡಿ ಅಂತಾ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಸಫೂರಾ ನೌಶಾದ್ ಎಂಬ ವಿದ್ಯಾರ್ಥಿನಿ ವಯನಾಡ್ ಜಿಲ್ಲಾಧಿಕಾರಿ ಎ.ಗೀತಾಗೆ ಇ-ಮೇಲ್ ಒಂದನ್ನು ಕಳುಹಿಸಿದ್ದಾಳೆ. ಬುಧವಾರ ರಜೆ ಘೋಷಿಸದಂತೆ ಮನವಿ ಮಾಡಿದ್ದಾಳೆ. ಜಿಲ್ಲಾಧಿಕಾರಿ ಗೀತಾ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿದ್ದಾರೆ. ಪುಟ್ಟ ವಿದ್ಯಾರ್ಥಿನಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಲ್ಕು ದಿನ ನಿರಂತರವಾಗಿ ಮನೆಯಲ್ಲಿರುವುದು ತುಂಬಾ ಕಷ್ಟ. ದಯವಿಟ್ಟು ಬುಧವಾರ ತರಗತಿ ನಡೆಸಿ ಎಂದು ವಿದ್ಯಾರ್ಥಿನಿ ಇಮೇಲ್‌ನಲ್ಲಿ ಬರೆದಿದ್ದಾಳೆ. ವಾರಾಂತ್ಯದ ರಜೆಯ ನಂತರ ಭಾರೀ ಮಳೆಯ ಹಿನ್ನೆಲೆಯಲ್ಲಿ ಸೋಮವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮೊಹರಂ ನಿಮಿತ್ತ ಮಂಗಳವಾರ ಸಹ ಸರ್ಕಾರಿ ರಜೆಯಿತ್ತು. ಹಾಗಾಗಿ ವಯನಾಡ್‌ನಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲೆಗಳು ಮುಚ್ಚಿದ್ದವು.
ಮನೆಯಲ್ಲೇ ಇದ್ದು ಬೇಸರಗೊಂಡ ವಿದ್ಯಾರ್ಥಿನಿ ಶಾಲೆಗೆ ಹೋಗಲು ಚಡಪಡಿಸಿದ್ದಾಳೆ. ವಿದ್ಯಾರ್ಥಿನಿಯನ್ನು ಹೊಗಳಿರುವ ಜಿಲ್ಲಾಧಿಕಾರಿ, ನಮ್ಮ ಮಕ್ಕಳು ಬುದ್ಧಿವಂತರು ಮತ್ತು ಅವರ ಪ್ರಪಂಚವು ವಿಶಾಲವಾಗಿದೆ. ಈ ದೇಶ ಮತ್ತು ಪ್ರಪಂಚದ ಭವಿಷ್ಯ ಅವರ ಕೈಯಲ್ಲಿ ಸುರಕ್ಷಿತವಾಗಿದೆ ಎಂದಿದ್ದಾರೆ. ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜ ಈ ಪೀಳಿಗೆಯ ಬಗ್ಗೆ ಹೆಮ್ಮೆ ಪಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.