ಹಲವಾರು ಕಂಪನಿಗಳಲ್ಲಿ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಉದ್ಯೋಗಿಗಳಿಗೆ ಬೋನಸ್ ಕೊಡಲಾಗುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ತಮ್ಮ ಉದ್ಯೋಗಿಗಳಿಗೆ ಬೋನಸ್ ಘೋಷಿಸಿರುವ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ..?
ಹೌದು, ಝೀರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ವಿಶ್ವ ಆರೋಗ್ಯ ದಿನದಂದು ತಮ್ಮ ಕಂಪನಿಯ ಸಿಬ್ಬಂದಿಗೆ ಹೊಸ ಆರೋಗ್ಯ ಉಪಕ್ರಮವನ್ನು ಘೋಷಿಸಿದ್ದಾರೆ. ಎಲ್ಲಾ ಉದ್ಯೋಗಿಗಳಿಗೆ ಸವಾಲೆಸೆದ ಕಾಮತ್, 25 ಕ್ಕಿಂತ ಕಡಿಮೆ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಹೊಂದಿರುವ ಯಾರಾದರೂ ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ ಎಂದು ಹೇಳಿದ್ದಾರೆ. ಅಂದರೆ, ತೂಕ ಕಳೆದುಕೊಳ್ಳುವ ಸಿಬ್ಬಂದಿಗೆ ಬೋನಸ್ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಆದರೆ ಕಂಪನಿ ಸಿಇಒರ ಇಂತಹ ಪರಿಕಲ್ಪನೆಯಿಂದ ಎಲ್ಲರೂ ರೋಮಾಂಚಿತರಾಗಿಲ್ಲ. ಇದು ಜನರನ್ನು ಫ್ಯಾಟ್‌ಫೋಬಿಯಾ ಮತ್ತು ದೇಹದ ಇಮೇಜ್ ಸಮಸ್ಯೆಗಳತ್ತ ತಳ್ಳುತ್ತದೆಯೇ ಎಂದು ನೆಟ್ಟಿಗರು ಆತಂಕಗೊಂಡಿದ್ದಾರೆ.
ಸಿಇಒ ನಿತಿನ್ ಕಾಮತ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಹಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಋಣಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಾಮತ್ ಸಮರ್ಥನೀಯ ಉತ್ತರವನ್ನು ನೀಡಿದ್ದಾರೆ.
ಇನ್ನು ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಗುರಿಯನ್ನು ತಲುಪಿದ ಪ್ರತಿಯೊಬ್ಬರಿಗೂ ಒಂದು ತಿಂಗಳ ವೇತನವನ್ನು ಬೋನಸ್ ಆಗಿ ಪಡೆಯಲಾಗುವುದು ಮತ್ತು ರೂ. 10 ಲಕ್ಷಕ್ಕೆ ಲಕ್ಕಿ ಡ್ರಾಗೆ ಅರ್ಹರಾಗಿರುತ್ತಾರೆ ಎಂದು ಸಿಇಒ ಘೋಷಿಸಿದ್ದಾರೆ.