ಶಿವಮೊಗ್ಗದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ತೀರ್ಥಹಳ್ಳಿ ತುಂಗಾನದಿ ದಡದಲ್ಲಿದೆ. ಮಲೆನಾಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ.
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧವಾದುದು. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುತ್ತಾರೆ.
ತೀರ್ಥಹಳ್ಳಿ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ಆಗುಂಬೆಯೂ ಒಂದಾಗಿದೆ. ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇನ್ನು ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಗೆ ಭೇಟಿ ಕೊಡಬಹುದು. ಕವಿಮನೆ, ಕವಿಶೈಲದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ ತೀರ್ಥಹಳ್ಳಿಗೆ ಸಮೀಪದಲ್ಲಿದೆ. ಇನ್ನೂ ಹಲವಾರು ಪ್ರವಾಸಿ ತಾಣಗಳು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇದ್ದು, ಮೊದಲೇ ಮಾಹಿತಿ ಪಡೆದು ಹೋಗಿ ಬರಬಹುದಾಗಿದೆ.