ನಟ ಹಾಗೂ ರಾಜಕಾರಣಿ ಚೋಳ ರಾಜನ ಕುರಿತಾದ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಚೋಳ ರಾಜ ರಾಜರಾಜ ಚೋಳ ಹಿಂದೂ ಅಲ್ಲ ಎಂದು ನಿರ್ದೇಶಕ ವೆಟ್ರಿಮಾರನ್ ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿತ್ತು.
ಚೋಳ ರಾಜನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ಅವರ ಹಳೆಯ ಸಂದರ್ಶನದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚೋಳ ಸಾಮ್ರಾಜ್ಯದ ರಾಜನ ಜೀವನಾಧಾರಿತ ‘ಪೊನ್ನಿಯಿನ್ ಸೆಲ್ವನ್-1’ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗ್ಲೇ ಸಿನೆಮಾದ ಕಲೆಕ್ಷನ್ 300 ಕೋಟಿ ದಾಟಿದೆ. ಇದೇ ಚಿತ್ರದಲ್ಲಿ ರಾಜರಾಜ ಚೋಳನ ಬಗ್ಗೆಯೂ ಚರ್ಚೆಯಾಗಿದೆ. ಮೊದಲನೆಯ ರಾಜರಾಜ ಚೋಳನು ಈ ಸಾಮ್ರಾಜ್ಯದ ಅತ್ಯಂತ ವೈಭವೋಪೇತ ರಾಜರಲ್ಲಿ ಒಬ್ಬನಾಗಿದ್ದ.
ಚಿತ್ರ ಬಿಡುಗಡೆಯಾದ ಕೆಲವು ದಿನಗಳ ನಂತರ, ತಮಿಳು ನಿರ್ದೇಶಕ ವೆಟ್ರಿಮಾರನ್, ಚೋಳ ರಾಜವಂಶದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಟ್ರಿಮಾರನ್, “ರಾಜರಾಜ ಚೋಳ ಹಿಂದೂ ರಾಜನಾಗಿರಲಿಲ್ಲ. ನಮ್ಮ ಚಿಹ್ನೆಗಳನ್ನು ನಿರಂತರವಾಗಿ ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ತಿರುವಳ್ಳುವರನ್ನು ಕೇಸರಿ ಬಣ್ಣ ಮಾಡುವುದು ಅಥವಾ ರಾಜರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ಇದಕ್ಕೆ ಉದಾಹರಣೆ. ಸಿನಿಮಾ ಜನಸಾಮಾನ್ಯರಿಗಾಗಿ, ಅದರ ಹಿಂದಿನ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯʼʼ ಎಂದಿದ್ದರು.
ದಕ್ಷಿಣ ಭಾರತದಲ್ಲಿ ಭವ್ಯವಾದ ಬೃಹತ್ ದೇವಾಲಯಗಳನ್ನು ನಿರ್ಮಿಸಿದ ಚೋಳ ರಾಜರ ಬಗ್ಗೆ ವೆಟ್ರಿಮಾರನ್ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿತ್ತು. ರಾಜರಾಜ ಚೋಳ ಹಿಂದೂ ಆಗಿದ್ದ ಎಂದು ಪ್ರತಿಪಾದಿಸಿರುವ ಬಿಜೆಪಿ ಮುಖಂಡ ಎಚ್. ರಾಜಾ, “ನನಗೆ ವೆಟ್ರಿಮಾರನ್‌ರಷ್ಟು ಇತಿಹಾಸದ ಬಗ್ಗೆ ತಿಳಿದಿಲ್ಲ, ಆದರೆ ಅವರು ರಾಜರಾಜ ಚೋಳ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಹೆಸರಿಸಬಹುದೇ? ರಾಜನು ತನ್ನನ್ನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದ. ಆತ ಹಿಂದೂ ಅಲ್ಲವೇ?ʼʼ ಎಂದು ಪ್ರಶ್ನಿಸಿದ್ದರು.
ಇದೀಗ ಕಮಲ್ ಹಾಸನ್ ನಿರ್ದೇಶಕರ ಬೆಂಬಲಕ್ಕೆ ಬಂದಿದ್ದಾರೆ. ರಾಜರಾಜ ಚೋಳನ ಕಾಲದಲ್ಲಿ ಹಿಂದೂ ಧರ್ಮ ಎಂಬ ಹೆಸರೇ ಇರಲಿಲ್ಲ. ಆ ಕಾಲದಲ್ಲಿ ವೈಷ್ಣವರು ಮತ್ತು ಶೈವರು ಇದ್ದರು. ಬ್ರಿಟಿಷರೇ ‘ಹಿಂದೂ’ ಎಂಬ ಪದವನ್ನು ಸೃಷ್ಟಿಸಿದರು. ಏಕೆಂದರೆ ಅವರಿಗೆ ಅದನ್ನು ಹೇಗೆ ಸಾಮೂಹಿಕವಾಗಿ ವ್ಯಕ್ತಪಡಿಸಬೇಕೆಂದು ತಿಳಿದಿಲ್ಲ. ಅವರು ತೂತುಕುಡಿಯನ್ನು ಟುಟಿಕೋರಿನ್ ಆಗಿ ಪರಿವರ್ತಿಸಿದಂತೆಯೇ ಇದು ಕೂಡ. ಎಂಟನೇ ಶತಮಾನದಲ್ಲಿ ಜನರಲ್ಲಿ ಅನೇಕ ಧರ್ಮಗಳು ಮತ್ತು ನಂಬಿಕೆಗಳು ಪ್ರವರ್ಧಮಾನಕ್ಕೆ ಬಂದವು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಕಮಲ್ ಹಾಸನ್, “ಇತಿಹಾಸವನ್ನು ಉತ್ಪ್ರೇಕ್ಷಿಸಬಾರದು ಅಥವಾ ತಿರುಚಬಾರದು. ಭಾಷಾ ಸಮಸ್ಯೆಗಳನ್ನು ಇದರಲ್ಲಿ ತರಬಾರದು” ಎಂದರು. ಈ ಹೇಳಿಕೆಯ ನಂತರ ಕರಣ್ ಥಾಪರ್ ನಡೆಸಿದ ಕಮಲ್ ಹಾಸನ್‌ರ ಸಂದರ್ಶನದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಕ್ರಿಸ್ತನ ಸಂದೇಶವನ್ನು ಜಗತ್ತಿಗೆ ಸಾರುತ್ತಿದ್ದರು ಎಂದು ಹೇಳಿದ್ದಾರೆ. ಕಮಲ್ ಹಾಸನ್ ಅವರ ಹೇಳಿಕೆಗೆ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಚೋಳ ರಾಜ ಹಿಂದೂ ಎಂಬ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.