ಚಿನ್ನವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ ? ಎಷ್ಟು ಕೊಂಡುಕೊಂಡ್ರೂ ಮತ್ತೂ ಬೇಕೆನಿಸುವ ವಸ್ತು ಅದು. ಭಾರತದಲ್ಲಿ ಅತಿ ಹೆಚ್ಚು ಬಂಗಾರ ಖರೀದಿ ಮಾಡುವವರು ಯಾರು ಎಂಬ ಬಗ್ಗೆ ಸಮೀಕ್ಷೆಯೊಂದು ನಡೆದಿದೆ.
ಐಜಿಪಿಸಿ ಬಿಡುಗಡೆ ಮಾಡಿರೋ ಈ ವರದಿಯ ಪ್ರಕಾರ ತಲಾವಾರು ಚಿನ್ನದ ಬಳಕೆ ಶ್ರೀಮಂತರಲ್ಲಿ ಅತ್ಯಧಿಕವಾಗಿದೆ. ಆದರೆ ಅತಿ ಹೆಚ್ಚು ಚಿನ್ನ ಕೊಂಡುಕೊಳ್ಳುತ್ತಿರುವವರು ಮಧ್ಯಮ ವರ್ಗದವರು.
ಹೆಚ್ಚಿನ ಆದಾಯ ಹೊಂದಿರುವ ವರ್ಗದವರು ಡಿಜಿಟಲ್ ಅಥವಾ ‘ಪೇಪರ್ ಫಾರ್ಮ್ಯಾಟ್’ನಲ್ಲಿ ಚಿನ್ನವನ್ನು ಹಿಡಿದಿಡಲು ಆಸಕ್ತಿ ಹೊಂದಿದ್ದಾರೆ. 2-10 ಲಕ್ಷ ರೂಪಾಯಿ ವಾರ್ಷಿಕ ಆದಾಯದ ವ್ಯಾಪ್ತಿಯ ಕುಟುಂಬಗಳಲ್ಲಿ ಹೆಚ್ಚಿನ ಚಿನ್ನದ ಬಳಕೆಯಾಗಿದೆ, ಇದು ಸರಾಸರಿ ಮೊತ್ತದ ಶೇ.56 ರಷ್ಟಿದೆ. ಅವರು ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುತ್ತಾರೆ.
ಉದಾಹರಣೆಗೆ ಚಿನ್ನ ಮತ್ತು ಚಿನ್ನದ ಉತ್ಪನ್ನಗಳು ಅಥವಾ ಬ್ಯಾಂಕ್ ಸ್ಥಿರ ಠೇವಣಿಗಳು, ಭವಿಷ್ಯ ನಿಧಿಗಳು, ಜೀವ ವಿಮೆ, ಪೋಸ್ಟ್ ಆಫೀಸ್ ಉಳಿತಾಯ ಇತ್ಯಾದಿ. ಬೇರೆ ಯೋಜನೆಗಳಿಗೆ ಹೋಲಿಸಿದರೆ ಇಲ್ಲಿ ಅಪಾಯ ಕಡಿಮೆ. ಆದರೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದವರಿಗೆ ಉಳಿತಾಯ ಎಂದರೆ ಅವರ ಹೆಚ್ಚುವರಿ ಗಳಿಕೆ, ಹೆಚ್ಚುವರಿ ಹಣ ಮತ್ತು ಬಂಡವಾಳದ ಲಾಭದ ಮೇಲೆ ಗಳಿಸುವುದು.
ಆದ್ದರಿಂದ ಅವರು ಷೇರುಗಳು ಅಥವಾ ಷೇರು ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಭಾರತದ ಗ್ರಾಹಕ ಆರ್ಥಿಕತೆಯ ಕುರಿತು ಪೀಪಲ್ ರಿಸರ್ಚ್ (PRICE) ಸಹಯೋಗದೊಂದಿಗೆ ಐಜಿಪಿಸಿ ನಡೆಸಿದ ಸಮೀಕ್ಷೆಯಲ್ಲಿ ಮನೆಗಳಲ್ಲಿ ಚಿನ್ನದ ಬಳಕೆಯ ಕುರಿತ ವರದಿಯನ್ನು ಸಿದ್ಧಪಡಿಸಲಾಗಿದೆ. 40,000 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
ನೋಟು ಅಮಾನ್ಯೀಕರಣ ಅಥವಾ ಜಿಎಸ್‌ಟಿ ಜಾರಿ ಚಿನ್ನದ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಆದಾಯ ಹೊಂದಿರುವ ಶೇ.74ರಷ್ಟು ಕುಟುಂಬಗಳು ಚಿನ್ನವನ್ನು ಖರೀದಿಸಿವೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಆಭರಣ ಖರೀದಿಯಲ್ಲಿ ಶೇ.65-70ರಷ್ಟು ಪಾಲು ಇದ್ದರೆ, ಶೇ.30-35ರಷ್ಟು ವಿವೇಚನಾ ವೆಚ್ಚವಾಗಿದೆ. ಸುಮಾರು 43 ಪ್ರತಿಶತದಷ್ಟು ಭಾರತೀಯ ಕುಟುಂಬಗಳು ಮದುವೆಗಾಗಿ ಚಿನ್ನವನ್ನು ಖರೀದಿಸಿದರೆ, 31 ಪ್ರತಿಶತದಷ್ಟು ಜನರು ಯಾವುದೇ ವಿಶೇಷ ಸಂದರ್ಭವಿಲ್ಲದೆ ಬಂಗಾರ ಕೊಳ್ಳುತ್ತಾರೆ.