ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…?
ಒಮ್ಮೆ ಪುಡಿ ಅಥವಾ ಎಲೆ ಹಾಕಿ ಸಕ್ಕರೆ ಬೆರಸಿ ಕುದಿಸಿ ಸೋಸಿ ಕುಡಿಯುವ ಚಹಾ ಆ ಕ್ಷಣದಲ್ಲೇ ಮುಗಿದುಬಿಡಬೇಕು. ಸ್ವಲ್ಪ ಉಳಿಯಿತೆಂದು ಹಾಗೇ ಮುಚ್ಚಿಟ್ಟು ತಣ್ಣಗಾದ ಬಳಿಕ ಮತ್ತೆ ಕುದಿಸಿ ಅಥವಾ ಬಿಸಿ ಮಾಡಿ ಕುಡಿಯುವುದರಿಂದ ಆರೋಗ್ಯ ಹಾನಿಯಾಗುವ ಸಾಧ್ಯತೆಯಿದೆ.
ಚಹಾದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚು. ಒಮ್ಮೆ ಮಾಡಿದ ಸಕ್ಕರೆ ಮತ್ತು ಹಾಲು ಬೆರೆಸಿದ ಚಹಾವನ್ನು ನಾಲ್ಕು ಗಂಟೆಗಳ ಬಳಿಕ ಮತ್ತೆ ಕುದಿಸಿ ಕುಡಿದರೆ ಇದರ ಬ್ಯಾಕ್ಟೀರಿಯಾ ಪ್ರಮಾಣ ವಿಷಕಾರಿಯಾಗಿ ಬದಲಾಗಿರುತ್ತದೆ. ಮತ್ತೆ ಕುದಿಸುವುದರಿಂದ ಚಹಾದ ಪರಿಮಳ ಇಲ್ಲವಾಗುತ್ತದೆ, ಸುಗಂಧವೂ ನಾಶವಾಗುತ್ತದೆ.
10-15 ನಿಮಿಷದೊಳಗಿದ್ದರೆ ಮಾತ್ರ ಮತ್ತೆ ಬಿಸಿ ಮಾಡಿ ಕುಡಿಯಬಹುದು. ಅದಕ್ಕಿಂತ ಹೆಚ್ಚು ಹೊತ್ತು ಕುಡಿಯದೆ ಹಾಗೆ ಬಿಡುವುದು ಒಳ್ಳೆಯದಲ್ಲ. ಕಣ್ಣಿಗೆ ಕಾಣಿಸದ ಈ ಸಣ್ಣ ಬ್ಯಾಕ್ಟೀರಿಯಾಗಳು ಹೊಟ್ಟೆಯುಬ್ಬರ, ವಾಕರಿಕೆ, ಅಜೀರ್ಣದಂಥ ಸಮಸ್ಯೆಯನ್ನು ತಂದೊಡ್ಡಬಹುದು.
ಅಷ್ಟಕ್ಕೂ ನೀವು ಚಹಾವನ್ನು ಲೋಹದ ಪಾತ್ರೆಯಲ್ಲಿ ಮಾಡಿಟ್ಟಿದ್ದರೆ ಹೆಚ್ಚು ಟಾಕ್ಸಿನ್ ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಚಹಾವನ್ನು ಕಹಿಗೊಳಿಸಿ ರುಚಿಯನ್ನೂ ಬದಲಾಯಿಸುತ್ತದೆ. ಮಾಮೂಲಿ ಚಹಾದ ಹೊರತಾಗಿ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾವಾದರೂ ಹೆಚ್ಚು ಹೊತ್ತು ಬಿಡುವುದು ಒಳ್ಳೆಯದಲ್ಲ.