ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕಾಗುತ್ತೆ, ಹಾಗಾಗಿ ಪುರುಷರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಫೇಸ್ ವಾಶ್ ಹಾಗೂ ಶೇವಿಂಗ್ ಕ್ರೀಮ್ ಆಯ್ಕೆಯಿಂದ ಹಿಡಿದು ಎಲ್ಲವೂ ಚಳಿಗಾಲಕ್ಕೆ ತಕ್ಕಂತಿರಬೇಕು.
ಒಳ್ಳೆಯ ಫೇಸ್ ವಾಶ್ ಬಳಸಿ : ಸಾಮಾನ್ಯವಾಗಿ ಗಂಡಸರು ತ್ವಚೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಸೋಪ್ ಮತ್ತು ನೀರಿನಿಂದ ಮುಖ ತೊಳೆದುಕೊಳ್ತಾರೆ. ಇದರಿಂದ ಮುಖದ ಚರ್ಮ ಒಣಗಿ ಹೋಗುತ್ತದೆ. ಹಾಗಾಗಿ ಚರ್ಮವನ್ನು ಮೃದುವಾಗಿ ಇಡಬಲ್ಲ ಉತ್ತಮ ಗುಣಮಟ್ಟದ ಫೇಸ್ ವಾಶ್ ಬಳಸಿ. ಬಿಸಿ ನೀರಿನ ಬದಲು ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆದುಕೊಳ್ಳಿ.
ವಿಂಟರ್ ಕ್ರೀಮ್ ಹಚ್ಚಿಕೊಳ್ಳಿ : ಮುಖ ತೊಳೆದ ಮೇಲೆ ವಿಂಟರ್ ಕ್ರೀಮ್ ಹಚ್ಚಿಕೊಳ್ಳಬೇಕು. ಇದರಿಂದ ನಿಮ್ಮ ಚರ್ಮ ತೇವಯುಕ್ತವಾಗಿರುತ್ತದೆ. ಚರ್ಮ ಒಣಗಿ, ಒರಟಾಗಿದ್ದಲ್ಲಿ ಸನ್ ಬರ್ನ್ ಅಪಾಯ ಹೆಚ್ಚು. ಗಾಳಿ ಹಾಗೂ ಧೂಳಿನಿಂದಲೂ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಉತ್ತಮ ಗುಣಮಟ್ಟದ ರೇಜರ್ ಬಳಸಿ : ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವಂತಹ ರೇಜರ್ ಬಳಸಿ. ಸಾಮಾನ್ಯವಾಗಿ ಎಲ್ಲರೂ ಪ್ರತಿದಿನ ಶೇವ್ ಮಾಡ್ತಾರೆ. ಹಾಗಾಗಿ ರೇಜರ್ ಗಿಂತಲೂ ಟ್ರಿಮ್ಮರ್ ಅಥವಾ ಮಷಿನ್ ಗಳನ್ನು ಬಳಸುವುದು ಉತ್ತಮ.
ಟೀ ಟ್ರೀ ಆಯಿಲ್ ಇರುವ ಶೇವಿಂಗ್ ಕ್ರೀಮ್ ಬಳಸಿ : ಶೇವಿಂಗ್ ಗೂ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಒಣಗಲು ಬಿಡಿ. ಬಳಿಕ ಶೇವಿಂಗ್ ಕ್ರೀಮ್ ಹಚ್ಚಿಕೊಳ್ಳಿ. ಶೇವಿಂಗ್ ಕ್ರೀಮ್ ಚೆನ್ನಾಗಿದ್ದಲ್ಲಿ, ಈಸಿಯಾಗಿ ಗಡ್ಡವನ್ನು ಶೇವ್ ಮಾಡಬಹುದು. ಇದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಆಂಟಿ ಬ್ಯಾಕ್ಟೀರಿಯಾ ಅಂಶವಿರುವ ಟೀ ಟ್ರೀ ಎಣ್ಣೆ ನಿಮ್ಮ ಮುಖದ ಚರ್ಮವನ್ನು ಕಾಪಾಡುತ್ತದೆ, ತ್ವಚೆಯನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ತುರಿಕೆ ಅಥವಾ ಇನ್ಯಾವುದೇ ಗುಳ್ಳೆಗಳಾಗದಂತೆ ತಡೆಯುತ್ತದೆ, ಜೊತೆಗೆ ಮೃದುವಾಗಿಡುತ್ತದೆ.