ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ನಿಧಾನವಾಗಿ, ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಮದುವೆಯಲ್ಲಿ ಅತಿ ಮುಖ್ಯವಾದದ್ದು ಸಪ್ತಪದಿ.
ಹಿಂದೂ ಧರ್ಮದ ಪ್ರಕಾರ ಸಪ್ತಪದಿ ತುಳಿದರೆ ಮಾತ್ರ ಮದುವೆಯಾದಂತೆ. ಅದರಲ್ಲೂ ಗೋಧೂಳಿ ಮುಹೂರ್ತದಲ್ಲಿ ಸಪ್ತಪದಿ ತುಳಿಯುವುದನ್ನು ಸರ್ವಶ್ರೇಷ್ಠ ಎಂದು ನಂಬಲಾಗಿದೆ. ಗೋಧೂಳಿ ಎಂದ್ರೆ ಅದು ಸಂಧ್ಯಾ ಕಾಲ. ಅಂದ್ರೆ ಗೋವುಗಳು ಮನೆಗೆ ಹಿಂತಿರುಗುವ ಸಮಯ. ಆಗ ಬರುವ ಧೂಳನ್ನು ಗೋಧೂಳಿ ಎಂದು ಕರೆಯಲಾಗುತ್ತದೆ.
ಹಿಂದೂ ಧರ್ಮದ ಪ್ರಕಾರ ಗೋವಿನಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಆಕಳು ಮನೆಗೆ ಬರುವ ಸಮಯ ಎಂದರೆ ಲಕ್ಷ್ಮಿ ಮನೆಗೆ ಬರ್ತಿದ್ದಾಳೆ ಎಂದರ್ಥ. ಹಾಗಾಗೇ ಈ ಸಮಯದಲ್ಲಿ ಗೃಹ ಲಕ್ಷ್ಮಿಯನ್ನು ಮನೆಯ ಸೊಸೆ ಮಾಡಿಕೊಳ್ತಾರೆ. ಆಕೆ ಮನೆಗೆ ಬಂದ ಮೇಲೆ ಸುಖ-ಶಾಂತಿ ಮನೆಯಲ್ಲಿ ನೆಲೆಸಿರಲಿ ಎಂಬ ಕಾರಣಕ್ಕೆ ಗೋಧೂಳಿ ಮುಹೂರ್ತದಲ್ಲಿ ಮದುವೆ ಮಾಡಲಾಗುತ್ತದೆ.
ಹಾಗೆ ಅದು ಸೂರ್ಯ ಹಾಗೂ ಚಂದ್ರ ಸಂಧಿಸುವ ಕಾಲ. ಸೂರ್ಯ ಹಾಗೂ ಚಂದ್ರ ಸಂಧಿಸುವ ಸಮಯ ಎಂದೆಂದೂ ಅಮರ. ಇದೇ ಮುಹೂರ್ತದಲ್ಲಿ ಒಂದಾದ ಜೋಡಿಗಳು ಕೂಡ ಅಮರವಾಗಲಿ ಎನ್ನುವ ನಂಬಿಕೆಯಿಂದ ಸಂಧ್ಯಾಕಾಲದಲ್ಲಿ ಮದುವೆ ಮಾಡಲಾಗುತ್ತದೆ.