ಸುಂದರವಾಗಿರುವ ಗಗನಸಖಿಯರ ಕೆಲಸ ಕೂಡ ಸುಲಭ ಅಂದುಕೊಳ್ತೇವೆ ನಾವು. ಕೈತುಂಬಾ ಸಂಬಳ, ವಿಮಾನದಲ್ಲಿ ಪ್ರಯಾಣ ವಾವ್ಹ್ ಎನ್ನುವವರೇ ಜಾಸ್ತಿ. ಆದ್ರೆ ನಿಮ್ಮ ಊಹೆ ತಪ್ಪು. ಗಗನಸಖಿಯಾಗೋದು ಸುಲಭದ ಮಾತಲ್ಲ. ತುಂಬಾ ಕಷ್ಟಕರ ತರಬೇತಿಗಳನ್ನು ಗಗನಸಖಿಯರು ಪಡೆಯಬೇಕಾಗುತ್ತದೆ.
ವಿಮಾನದಲ್ಲಿ ಗಗನಸಖಿಯರು ದಾದಿ, ವೈದ್ಯ, ಈಜುಗಾರ್ತಿ, ಜೀವ ಉಳಿಸುವ ರಕ್ಷಕ, ಪರಿಚಾರಕ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಎಲ್ಲ ಕೆಲಸದ ಜೊತೆ ಗ್ಲಾಮರ್ ಹಾಗೂ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗುತ್ತದೆ. ಇದೆಲ್ಲದರ ಬಗ್ಗೆ ಗಗನಸಖಿಯರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಗಗನಸಖಿಯಾಗಿ ಕೆಲಸ ಮಾಡಬೇಕಾದ್ರೆ ಕಠಿಣ ತರಬೇತಿ ಎದುರಿಸಬೇಕು. ಕೆಲಸಕ್ಕೆ ಮುನ್ನ ತರಬೇತಿ ಶಾಲೆಗೆ ಅವ್ರನ್ನು ಕಳುಹಿಸಲಾಗುತ್ತದೆ. ಈ ತರಬೇತಿ ಕ್ಲಾಸ್ ನಲ್ಲಿ ಫೇಲ್ ಆದವರನ್ನು ವಿಮಾನಯಾನ ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ತರಬೇತಿಯಲ್ಲಿ ಪಾಸ್ ಆಗುವುದು ಬಹು ಮುಖ್ಯವಾಗುತ್ತದೆ.
ವಿಶೇಷವಾಗಿ ಮಕ್ಕಳನ್ನು ಹೇಗೆ ಸಂಭಾಳಿಸೋದು ಎಂಬುದನ್ನೂ ಗಗನಸಖಿಯರು ಹಾಗೂ ಫ್ಲೈಟ್ ಅಟೆಂಡರ್ ಗಳಿಗೆ ತಿಳಿಸಲಾಗುತ್ತದೆ. ಕೃತಕವಾಗಿ ಹೇಗೆ ಉಸಿರಾಡಬೇಕು ಎಂಬುದನ್ನೂ ಹೇಳಿಕೊಡಲಾಗುತ್ತದೆ. ಇಷ್ಟೇ ಅಲ್ಲ ಫ್ಲೈಟ್ ನಲ್ಲಿ ಹೆರಿಗೆ ಮಾಡಿಸೋದು ಹೇಗೆ ಎಂಬುದನ್ನು ಗಗನ ಸಖಿಯರು ತಿಳಿದಿರಬೇಕಾಗುತ್ತದೆ.
ಇಷ್ಟೇ ಅಲ್ಲ 90 ಸೆಕೆಂಡ್ ನಲ್ಲಿ ವಿಮಾನದಲ್ಲಿರುವ ಪ್ರಯಾಣಿಕರು ಹಾಗೂ ಸಾಮಾನುಗಳನ್ನು ಹೇಗೆ ಖಾಲಿ ಮಾಡೋದು ಎಂಬ ಬಗ್ಗೆಯೂ ಟ್ರೈನಿಂಗ್ ನೀಡಲಾಗುತ್ತದೆ. ಇನ್ನೊಬ್ಬ ವ್ಯಕ್ತಿಯನ್ನು ಹಿಡಿದು ಹೇಗೆ ಈಜಬೇಕು ಎನ್ನುವ ಬಗ್ಗೆ ಕೂಡ ತರಬೇತಿ ನಡೆಯುತ್ತದೆ.