ಕ್ರೆಡಿಟ್ ಸ್ಕೋರ್ ನಿಮಗೆ ವಿಧಿಸುವ ಬಡ್ಡಿ ದರದ ಮೇಲೆ ಪ್ರಭಾವ ಬೀರುತ್ತದೆ. ನೀವೇನಾದ್ರೂ ಪ್ರಾಪರ್ಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ, ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ತನಿಖೆ ಮಾಡ್ತಾರೆ. ಅದರಲ್ಲೇನಾದ್ರೂ ಸಮಸ್ಯೆ ಎನಿಸಿದ್ರೆ ನಿಮ್ಮ ಅರ್ಜಿಯನ್ನೇ ತಿರಸ್ಕರಿಸಲೂಬಹುದು. ಅಥವಾ ಹೆಚ್ಚಿನ ಬಡ್ಡಿ ದರವನ್ನು ವಿಧಿಸಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿದ್ದಲ್ಲಿ ಉತ್ತಮ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ನಿಮ್ಮ CIBIL ಸ್ಕೋರ್ 700ಕ್ಕಿಂತ ಜಾಸ್ತಿ ಇದ್ದಲ್ಲಿ ಶೇ.6.7ರ ಬಡ್ಡಿ ದರದಲ್ಲಿ ನಿಮಗೆ ಸುಮಾರು 2 ಕೋಟಿ ರೂಪಾಯಿವರೆಗೂ ಗೃಹಸಾಲ ಸಿಗುತ್ತದೆ. CIBIL ಸ್ಕೋರ್ 600ಕ್ಕಿಂತ ಕಡಿಮೆಯಿದ್ದರೆ ಬಡ್ಡಿ ದರ ಶೇ.7.5ರಷ್ಟಾಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ನೀವು 20 ವರ್ಷಗಳ ಅವಧಿಯಲ್ಲಿ 24 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಆರ್ಥಿಕವಲ್ಲದ ಕೆಲವು ಸಂಗತಿಗಳು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅಳೆಯಬಲ್ಲ ಮಾಧ್ಯಮಗಳಾಗುವುದು ವಿಶೇಷ.
ಒಂದಲ್ಲ ಒಂದು ಕಡೆ ಸಾಲ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಕೆಲವರು ಒಮ್ಮೆಲೇ ಹಲವು ಕಡೆ ಲೋನ್ ಗಾಗಿ ಪ್ರಯತ್ನಿಸ್ತಾರೆ. ಇದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ನೀವು ಸಾಲಕ್ಕಾಗಿ ಅರ್ಜಿ ಹಾಕಿದ ತಕ್ಷಣವೇ ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಜಾಲಾಡಿ ಬಿಡುತ್ತವೆ.
ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುವ ಇನ್ನೊಂದು ಅಂಶವೆಂದರೆ ನಿಮ್ಮ ಒಟ್ಟಾರೆ ಸಾಲದಲ್ಲಿರುವ ಅಸುರಕ್ಷಿತ ಲೋನ್ ಗಳ ಅನುಪಾತ. ಎಫ್ ಡಿ, ಗೃಹ ಸಾಲ, ಜೀವ ವಿಮೆಗಾಗಿ ನೀವು ಸಾಲ ಪಡೆದಿದ್ರೆ, ಆಸ್ತಿ ಸಂಪಾದನೆಗೆ ನಿಮ್ಮ ಪ್ರಯತ್ನ ನಡೆದಿದೆ ಅನ್ನೋದು ಬ್ಯಾಂಕ್ ಗಳಿಗೆ ಖಾತರಿಯಾಗಿಬಿಡುತ್ತದೆ.
ನಿಮ್ಮ ಕ್ರೆಡಿಟ್ ಮಿತಿ 1.5 ಲಕ್ಷ ರೂಪಾಯಿ ಇದ್ದು, ಆ ಹಣವನ್ನ ತಿಂಗಳ ಖರ್ಚಿಗೆ ಸಂಪೂರ್ಣವಾಗಿ ನೀವು ಬಳಸಿಕೊಳ್ಳುತ್ತಿದ್ರೆ ಅದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಒಂದೇ ಕ್ರೆಡಿಟ್ ಕಾರ್ಡ್ ನಲ್ಲಿ ಶೇ.90ರಷ್ಟು ಹಣವನ್ನು ಬಳಸುವ ಬದಲು, 2-3 ಕಾರ್ಡ್ ಗಳನ್ನಿಟ್ಟುಕೊಂಡು ಅದರಲ್ಲಿ ಶೇ.30ರಂತೆ ಬಳಕೆ ಮಾಡಬಹುದು.
ಕೆಲವೊಮ್ಮೆ ಸಾಲವನ್ನು ಮರುಪಾವತಿಸಲು ಕಷ್ಟಪಡಬೇಕಾಗಿ ಬರುತ್ತದೆ. ಸಮಾನವಾದ ಮಾಸಿಕ ಕಂತುಗಳಲ್ಲಿ ಕಟ್ಟಲು ಕಷ್ಟವೆಂದು ಒಮ್ಮೆಲೇ ಹಣ ಪಾವತಿಸಿಬಿಡುತ್ತಾರೆ. ಇದರಿಂದ ಸಾಲ ತೀರಿಹೋದರೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಾಲಗಾರರಿಗೆ ಹಣ ಕೊಡಲು ಬ್ಯಾಂಕ್ ಗಳು ಮುಂದಾಗುವುದೇ ಇಲ್ಲ. ನಮ್ಮ ಆತ್ಮೀಯರಿಗೆ ಸಾಲ ಕೊಡಿಸಲು ಶ್ಯೂರಿಟಿ ಹಾಕುತ್ತೇವೆ. ಅವರಿಗೆ ಸಹಾಯ ಮಾಡುತ್ತಿದ್ದೇನೆಂಬ ಭಾವನೆ ನಮ್ಮಲ್ಲಿರುತ್ತದೆ, ಆದ್ರೆ ಆ ಸಾಲಕ್ಕೆ ನಾವೇ ಹೊಣೆಗಾರರು ಎಂಬುದರ ಅರಿವಿರುವುದಿಲ್ಲ. ಲೋನ್ ಪಡೆದವರಿಗಿಂತಲೂ ಹೆಚ್ಚಿನ ಜವಾಬ್ಧಾರಿ ನಿಮ್ಮ ಮೇಲಿರುತ್ತದೆ.
ಕ್ರೆಡಿಟ್ ಸ್ಕೋರ್ ಉತ್ತಮವಾಗಬೇಕಂದ್ರೆ ಸಾಲದ ಸಂಖ್ಯೆಯನ್ನು ಕಡಿಮೆ ಮಾಡಿ. ಅತಿ ಹೆಚ್ಚು ಬಡ್ಡಿ ಇರುವ ಸಾಲವನ್ನು ಮೊದಲು ತೀರಿಸಿಬಿಡಿ. ಆದ್ರೆ ಗೃಹಸಾಲವನ್ನು ಮುಂದುವರಿಸಿ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಪಡಿಸಬಲ್ಲದು. ಸಾಲವನ್ನು ನೀವು ನಿಭಾಯಿಸಬಲ್ಲಿರಿ ಅನ್ನೋದು ಬ್ಯಾಂಕ್ ಗಳಿಗೆ ಖಾತ್ರಿಯಾಗುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್ ಗಳಲ್ಲೇನಾದ್ರೂ ತಪ್ಪುಗಳಿದ್ರೆ ತಕ್ಷಣವೇ ಸರಿಪಡಿಸಿಕೊಳ್ಳಿ. ಬ್ಯಾಂಕ್ ಗಳನ್ನು ಸಂಪರ್ಕಿಸಿ. ಭವಿಷ್ಯದಲ್ಲಿ ನೀವು ಸಾಲ ಪಡೆಯುವ ಸಂದರ್ಭ ಬಂದರೆ ಕ್ರೆಡಿಟ್ ರಿಪೋರ್ಟ್ ಬಹಳ ಮುಖ್ಯ.