ಈ ಹಿಂದೆ ವಯಸ್ಸಾದವರಿಗೆ ಮಾತ್ರ ಕ್ಯಾನ್ಸರ್ ಬರುತ್ತದೆ ಎಂದು ನಂಬಲಾಗಿತ್ತು. ಆದ್ರೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ ಪ್ರಕಾರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕ್ಯಾನ್ಸರ್ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ. 1970ರಲ್ಲಿ ಜನಿಸಿದವರಿಗಿಂತ 1990 ರ ನಂತರ ಜನಿಸಿದವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ಯಾನ್ಸರ್‌ಗೆ ಕಾರಣ……
ಸಾಮಾನ್ಯವಾಗಿ ಗುಟ್ಕಾ, ಧೂಮಪಾನ, ಮದ್ಯಪಾನ ಮತ್ತು ಮಾಲಿನ್ಯ ಕ್ಯಾನ್ಸರ್‌ಗೆ ಕಾರಣವೆಂದು ಪರಿಗಣಿಸಲಾಗಿದೆ. ಆದರೆ ಹೊಸ ಸಂಶೋಧನೆಯ ಪ್ರಕಾರ ನಮ್ಮ ಜೀವನಶೈಲಿ ಸಹ ಕ್ಯಾನ್ಸರ್‌ಗೆ ಕಾರಣವಾಗಿದೆ.
ಆಹಾರ, ಜೀವನಶೈಲಿ, ಪರಿಸರ ಮತ್ತು ನಮ್ಮ ಹೊಟ್ಟೆಯಲ್ಲಿ ವಾಸಿಸುವ ಹುಳುಗಳು (ಮೈಕ್ರೋಬಯೋಮ್) ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಾಗಿವೆ. ಸ್ಥೂಲಕಾಯತೆ ಕೂಡ ಕ್ಯಾನ್ಸರ್‌ನ ಪ್ರಮುಖ ಕಾರಣಗಳಲ್ಲೊಂದು.
ಬಾಲ್ಯದಿಂದಲೂ ಬೊಜ್ಜು ಇರುವವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಪೌಷ್ಟಿಕಾಂಶದ ಕೊರತೆಯೂ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಗರ್ಭಿಣಿಯರಲ್ಲಿ ಪೌಷ್ಠಿಕಾಂಶದ ಕೊರತೆಯಿದ್ದರೆ, ಆಕೆಯ ಮಗುವಿಗೆ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.
ಯಾರಿಗೆ ಹೆಚ್ಚು ಅಪಾಯ ?
50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕ್ಯಾನ್ಸರ್ ವಂಶವಾಹಿಗಳು ವಿಭಿನ್ನವಾಗಿವೆ. ಅದರ ಪರಿಣಾಮವೂ ವಿಭಿನ್ನವಾಗಿರುತ್ತದೆ. 50ನೇ ವಯಸ್ಸಿನಲ್ಲಿ ಕ್ಯಾನ್ಸರ್ ಬಂದಾಗ ಇದು ಹೆಚ್ಚು ಹಾನಿಕಾರಕವಾಗಿರುತ್ತದೆ.
ಹೊಸ ಪೀಳಿಗೆಯವರಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬ್ರಿಗಮ್ ಅಂಡ್ ವುಮೆನ್ಸ್ ಹಾಸ್ಪಿಟಲ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯ 14 ಬಗೆಯ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸಿವೆ. ಇದರಲ್ಲಿ ಬೇರೆ ಬೇರೆ ಕಾರಣಗಳು ಮುನ್ನೆಲೆಗೆ ಬಂದಿವೆ. ನೀವು ಕ್ಯಾನ್ಸರ್‌ನಿಂದ ಪಾರಾಗಲು ಬಯಸಿದ್ರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.