ಬಾಲಿವುಡ್ ನ ಖಳನಾಯಕ ಎಂದೇ ಫೇಮಸ್ ಆಗಿರೋ ನಟ ಸಂಜಯ್ ದತ್ ರನ್ನ ಹೀರೋ ಆಗಿ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಅದೇ ರೀತಿ ಸಂಜು ಬಾಬಾರ ನೆಗೆಟಿವ್ ಅವತಾರಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದೀಗ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನ ಗೆಟಪ್ ನಲ್ಲಿ ಸಂಜಯ್ ದತ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಪಾತ್ರಕ್ಕಾಗಿ ಸಂಜಯ್ ದತ್ ಸಾಕಷ್ಟು ಶ್ರಮಪಟ್ಟಿದ್ದಾರೆ. ದತ್ ರ ಕೇಶ ವಿನ್ಯಾಸಕರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಕೆಜಿಎಫ್ ಚಾಪ್ಟರ್ 2ನಲ್ಲಿ ನಟ ಯಶ್, ರಾಕಿ ಭಾಯ್ ಅವತಾರದಲ್ಲಿ ಮಿಂಚಿದ್ದಾರೆ. ನೆಗೆಟಿವ್ ರೋಲ್ ನಲ್ಲಿ ಸಂಜು ಬಾಬಾ ಕೂಡ ಅಷ್ಟೇ ಅದ್ಭುತವಾಗಿ ಅಭಿನಯಿಸಿರುವುದರಿಂದ ಇವರಿಬ್ಬರ ನಡುವಣ ಟಕ್ಕರ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗ್ಲೇ ಚಿತ್ರದ ಟ್ರೇಲರ್ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಕೇವಲ 4 ದಿನಗಳಲ್ಲಿ 6 ಕೋಟಿಗೂ ಹೆಚ್ಚು ಜನರು ಟ್ರೇಲರ್ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ರ ಅಧೀರಾ ಲುಕ್ ಬಗ್ಗೆ ಕೇಶವಿನ್ಯಾಸಕ ನವೀನ್ ಶೆಟ್ಟಿ ಸಾಕಷ್ಟು ಮಾಹಿತಿ ನೀಡಿದ್ದಾರೆ.
ಅಧೀರಾ ಲುಕ್ ತುಂಬಾನೇ ಆಕರ್ಷಕವಾಗಿದೆ. ಈ ಲುಕ್ ಗಾಗಿ ಸಂಜಯ್ ದತ್ ಗೆ ಮೇಕಪ್ ಮಾಡಲು ಪ್ರತಿದಿನ ಒಂದು ಗಂಟೆ ಬೇಕಾಗುತ್ತಿತ್ತಂತೆ. ಅಷ್ಟೇ ಅಲ್ಲ 25 ಕೆಜಿ ತೂಕದ ಕವಚವನ್ನು ದತ್ ಧರಿಸಿದ್ದರು. ಇಷ್ಟು ಭಾರ ಹೊತ್ತು ಮೇಕಪ್ ಮಾಡಿಸಿಕೊಂಡು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.
ಅಧೀರಾ ಪಾತ್ರಕ್ಕಾಗಿ ಸಂಜಯ್ ದತ್ ಶೂಟಿಂಗ್ ಮಾಡುತ್ತಿರುವ ಸಂದರ್ಭದಲ್ಲೇ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ಕೂಡ ನಡೆಯುತ್ತಿತ್ತು. ಕ್ಯಾನ್ಸರ್ ಗೆದ್ದು ಬರುತ್ತೀನೋ ಇಲ್ಲವೋ ಎಂಬ ಆತಂಕದ ನಡುವೆಯೇ ಅದ್ಭುತವಾಗಿ ಅಭಿಯನಿಸಿದ್ದಾರೆ ಸಂಜು ಬಾಬಾ.