ಬಾಲಿವುಡ್ ನ ಖ್ಯಾತ ನಟಿ ಪೂಜಾ ಬೇಡಿ 1990 ರ ದಶಕದಲ್ಲಿ ಕಾಂಡೋಮ್ ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡು ಮೊದಲ ವಿವಾದಕ್ಕೆ ಗುರಿಯಾಗಿದ್ದರು ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಮಾಡೆಲ್ ಮತ್ತು ನಟಿಯಾಗಿರುವ ಪೂಜಾ ಬೇಡಿ ಅವರು ಕಾಮಸೂತ್ರ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಬಗ್ಗೆ ತೀವ್ರ ವಿವಾದ ಸೃಷ್ಟಿಯಾಗಿ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಈ ಜಾಹೀರಾತು ಪ್ರಸಾರವನ್ನು ನಿಷೇಧಿಸಲಾಗಿತ್ತು.
ಆದರೆ, ಕಾಂಡೋಮ್ ಜಾಹೀರಾತಿನಲ್ಲಿ ನಟಿಸಿದ್ದರ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಹೇಳಿರುವ ಪೂಜಾ ಬೇಡಿ, “ಆ ಜಾಹೀರಾತು ಭಾರತದಲ್ಲಿ ಲೈಂಗಿಕ ಕ್ರಾಂತಿಯ ಆರಂಭ’’ ಎಂದು ಬಣ್ಣಿಸಿದ್ದಾರೆ.
ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪೂಜಾ ಬೇಡಿ, “ಫೈರ್ ಸ್ಟಾರ್ಟರ್ ಆಗಿದ್ದುದು ಅದ್ಭುತವಾಗಿದೆ. ಬ್ರಿಟಿಷ್ ಟ್ಯಾಬ್ಲಾಯ್ಡ್ ಗಳು ಆ ಜಾಹೀರಾತು ಅಭಿಯಾನವನ್ನು ಭಾರತದಲ್ಲಿ ಲೈಂಗಿಕ ಕ್ರಾಂತಿಯ ಆರಂಭ ಎಂದು ಬಣ್ಣಿಸಿದ್ದವು. ಜಾಹೀರಾತು ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಮತ್ತು ಜಾಹೀರಾತು ಕ್ಷೇತ್ರದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿತು’’ ಎಂದು ಹೇಳಿಕೊಂಡಿದ್ದಾರೆ.
ಕಬೀರ್ ಬೇಡಿ ಮತ್ತು ಪ್ರತಿಮಾ ಬೇಡಿ ಅವರ ಪುತ್ರಿಯಾಗಿರುವ ಪೂಜಾ ಬೇಡಿ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇದ್ದರು. ಇದಕ್ಕೆ ಇವರ ತಾಯಿ ಪ್ರತಿಮಾ ಬೇಡಿ ಅವರೇನೂ ಹೊರತಾಗಿರಲಿಲ್ಲ. 1974 ರಲ್ಲಿಯೇ ಗೋವಾ ಬೀಚ್ ನಲ್ಲಿ ನಗ್ನವಾಗಿ ಓಡಿದ್ದ ನಟಿ ಪ್ರತಿಮಾ ಬೇಡಿ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.