ಕಚೋರಿ ತಿನ್ನಲೆಂದು ಅನುಮತಿಯಿಲ್ಲದ ಸ್ಥಳದಲ್ಲಿ ರೈಲನ್ನು ನಿಲ್ಲಿಸಿದ ಚಾಲಕ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಇದರ ಪರಿಣಾಮವಾಗಿ ಐವರು ಸಿಬ್ಬಂದಿಯನ್ನು ರೈಲ್ವೆ ಇಲಾಖೆಯು ಅಮಾನತುಗೊಳಿಸಿದೆ.
ರಾಜಸ್ಥಾನದ ಅಲ್ವಾರ್ ಎಂಬಲ್ಲಿ ವೈರಲ್ ಆಗಿರುವ ವಿಡಿಯೋ ಇದಾಗಿದೆ. ಅಲ್ವಾರ್ ಜಂಕ್ಷನ್ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ದೌದ್ಪುರ ಕ್ರಾಸಿಂಗ್ನಿಂದ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲು ಚಾಲಕ ಕಚೋರಿಯನ್ನು ಪಡೆದುಕೊಳ್ಳಲು ರೈಲ್ವೆ ಕ್ರಾಸಿಂಗ್ ಬಳಿಯಲ್ಲಿ ರೈಲನ್ನು ನಿಲ್ಲಿಸಿದ್ದಾನೆ. ಇದಾದ ಬಳಿಕ ಚಾಲಕನ ಬಳಿ ಬಂದ ವ್ಯಕ್ತಿಯು ಪ್ಲಾಸ್ಟಿಕ್ ಬ್ಯಾಗ್ನ್ನು ಚಾಲಕನಿಗೆ ನೀಡಿದ್ದಾರೆ. ಇದರಲ್ಲಿ ಅಲ್ವಾರ್ನ ಪ್ರಸಿದ್ಧ ಖಾಸ್ತಾ ಕಚೋರಿ ಇತ್ತು ಎನ್ನಲಾಗಿದೆ.
ರೈಲು ಚಾಲಕನ ಈ ಬೇಜವಾಬ್ದಾರಿಯುತ ನಡೆಯಿಂದಾಗಿ ಕ್ರಾಸಿಂಗ್ ಗೇಟ್ನ್ನು ಕೆಳಗಿಳಿಸಬೇಕಾಯಿತು ಹಾಗೂ ರೈಲು ಹೊರಡುವವರೆಗೂ ಕ್ರಾಸಿಂಗ್ನಲ್ಲಿದ್ದವರು ಕಾಯಬೇಕಾಯಿತು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಈ ಸಂಪೂರ್ಣ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ರೈಲ್ವೆ ಇಲಾಖೆ ಈ ಸಂಬಂಧ ವಿಚಾರಣೆ ನಡೆಸಿದೆ. ಹಾಗೂ ಐವರನ್ನು ಅಮಾನತುಗೊಳಿಸಿದೆ. ಸ್ಟೇಷನ್ ಸೂಪರಿಂಟೆಂಡೆಂಟ್, ಇಬ್ಬರು ರೈಲು ಚಾಲಕರು ಹಾಗೂ ಇಬ್ಬರು ಗೇಟ್ಮ್ಯಾನ್ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ .