ಕೋಲ್ಕತ್ತಾ: ಆಗೊಮ್ಮೆ ಈಗೊಮ್ಮೆ, ಇನ್ಸ್ಟಾಗ್ರಾಂ ನ ರೀಲ್ಸ್ ವಿಭಾಗವು ಆಕರ್ಷಕ ಹಾಡುಗಳು, ನೃತ್ಯಗಳು, ಉತ್ಸಾಹಭರಿತ ರಿಮಿಕ್ಸ್ ಗಳಿಂದ ತುಂಬಿರುತ್ತದೆ. 2022 ರ ಆರಂಭದಲ್ಲಿ ಬಂದಿರೋ ವಿಭಿನ್ನ ರಿಮೀಕ್ಸ್ ದೇಶದೆಲ್ಲೆಡೆ ಭಾರಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರನಿಂದ ಹಾಡಲ್ಪಟ್ಟ ಬಂಗಾಳಿ ಜಾನಪದ ಹಾಡು ಕಚಾ ಬಾದಮ್ ವೈರಲ್ ಸೆನ್ಸೇಷನ್ ಆಗಿರೋದು ಬಹುಶಃ ನಿಮಗೆ ತಿಳಿದಿರಬಹುದು. ಈ ಹಾಡನ್ನು ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇಷ್ಟಪಟ್ಟಿದ್ದಾರೆ.
ಭೋಜ್‌ಪುರಿ ತಾರೆ ರಾಣಿ ಚಟರ್ಜಿ, ಶೈಲು ಶರ್ಮಾ ಮತ್ತು ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ಹಾಡಿಗೆ ನೃತ್ಯ ಮಾಡಿದ ವಿಡಿಯೋಗಳು ವೈರಲ್ ಆಗಿವೆ. ವೈರಲ್ ವಿಡಿಯೋದಲ್ಲಿ ಹಾಡನ್ನು ಹಾಡಿರುವ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರು ತಮ್ಮ ಆಕಾಂಕ್ಷೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವೃತ್ತಿ ಜೀವನವನ್ನು ಸಂಗೀತದಲ್ಲಿ ಮುಂದುವರಿಸಲು ಅವರು ಬಯಸಿರುವುದಾಗಿ ಹೇಳಿದ್ದಾರೆ.
ಕೋವಿಡ್ ಲಸಿಕಾ ಪ್ರಮಾಣಪತ್ರ ಡೌನ್‌ಲೋಡ್ ಮಾಡಲು ಇಲ್ಲಿದೆ ಟಿಪ್ಸ್
ತಮ್ಮ ಹಾಡಿಗೆ ನೆಟ್ಟಿಗರು ತೋರಿದ ಪ್ರತಿಕ್ರಿಯೆಗೆ ಕಣ್ಣಲ್ಲಿ ನೀರು ಜಿನುಗಿದ್ದಾಗಿ ಬಡ್ಯಾಕರ್ ತಿಳಿಸಿದ್ದಾರೆ. ಜನರು ಅವರನ್ನು ಕಡಲೆಕಾಯಿ ಮಾರಾಟಗಾರನಂತೆ ನೋಡದೆ ಗಾಯಕನಂತೆ ನೋಡುತ್ತಿರುವುದು ಖುಷಿ ತಂದಿರುವುದಾಗಿ ತಿಳಿಸಿದ್ದಾರೆ.
ಕಡಲೆಕಾಯಿ ಮಾರಾಟ ಮತ್ತು ಗ್ರಾಹಕರನ್ನು ಸೆಳೆಯುವ ಮಾರ್ಗವಾಗಿ ಬಡ್ಯಾಕರ್ ಅವರು ರಚಿಸಿ, ಹಾಡಿರುವ ವಿಡಿಯೋವನ್ನು ಎರಡು ತಿಂಗಳ ಹಿಂದೆ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, 21 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ತದನಂತರ, ಸಂಗೀತಗಾರ ನಜ್ಮು ರೀಚಾಟ್ ಹಾಡಿನ ರೀಮಿಕ್ಸ್ ಅನ್ನು ರಚಿಸಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದೆ.