ಕಂಪ್ಯೂಟರ್ ಈಗ ನಮ್ಮ ಜೀವನದ ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲ ಕ್ಷೇತ್ರದಲ್ಲೂ ಕಂಪ್ಯೂಟರ್ ನ ಪಾತ್ರ ಇದ್ದೇ ಇದೆ. ನಮ್ಮ ಜೀವನದಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿರುವ ಕಂಪ್ಯೂಟರ್ ನಿಂದ ಅನೇಕ ವ್ಯಾಧಿಗಳೂ ಬರುತ್ತಿವೆ. ಇಂತಹ ವ್ಯಾಧಿಗಳಲ್ಲಿ ಕಣ್ಣಿನ ತೇವ ಆರಿಹೋಗುವುದು, ತಲೆ ಮತ್ತು ಬೆನ್ನಿನ ಮಾಂಸಖಂಡಗಳ ನೋವು ಮುಖ್ಯವಾದುದು.
ಒಂದು ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 10 ದಶಲಕ್ಷ ಮಂದಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಗೆ ಗುರಿಯಾಗುತ್ತಿದ್ದಾರೆ. ಪ್ರತಿದಿನವೂ 3 ಗಂಟೆಗಳಿಗೂ ಮೀರಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಅಧಿಕವಾಗಿರುತ್ತದೆಂದು ಈ ಅಧ್ಯಯನ ಹೇಳಿದೆ.
ಈ ಸಿಂಡ್ರೋಮ್ ಗೆ ಕಂಪ್ಯೂಟರ್ ನಿಂದ ಹೊರಬೀಳುವ ರೇಡಿಯೇಷನ್ ಒಂದು ಮುಖ್ಯ ಕಾರಣವಾಗಿದೆ. ಅದೇ ರೀತಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ವಿಧಾನ, ಹಲವಾರು ಗಂಟೆಗಳ ಕಾಲ ಅಗಲದೇ ಕಂಪ್ಯೂಟರ್ ಕೆಲಸ ಮಾಡುವುದರಿಂದಲೂ ಸಿವಿಎಸ್ ಉಂಟಾಗುತ್ತದೆ.
ಪರಿಹಾರ ಏನು?
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರು ಆಂಟಿ ಗ್ಲೇರ್ ಕನ್ನಡಕಗಳನ್ನು ಬಳಸಿ ಕಂಪ್ಯೂಟರ್ ಕೆಲಸ ಮಾಡಬೇಕು. ಪ್ರತಿ ಮೂರು ಗಂಟೆಗಳಿಗೊಮ್ಮೆಯಾದರೂ 10 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ತಣ್ಣೀರಿನಿಂದ ಮುಖ ತೊಳೆಯಬೇಕು.
ಕಂಪ್ಯೂಟರ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕಣ್ಣು ಮಿಟುಕಿಸುವುದು ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ಬಾರಿ ಕಣ್ಣಿನ ರೆಪ್ಪೆಗಳನ್ನು ಮುಚ್ಚಿ ತೆರೆದು ಮಾಡಬೇಕು. ಇನ್ನು ಡ್ರೈ ಐಸ್ ನಿಂದ ಬಾಧೆ ಪಡುತ್ತಿರುವವರು ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಬಳಸಬೇಕು.