ಭಾರತದಲ್ಲಿ 5G ನೆಟ್ವರ್ಕ್ ಬಿಡುಗಡೆಗೆ ಸಜ್ಜಾಗಿದೆ. ಅತಿ ವೇಗದ ಇಂಟರ್ನೆಟ್ ಕನೆಕ್ಷನ್ ಸದ್ಯದಲ್ಲೇ ಜನರಿಗೆ ಲಭ್ಯವಾಗಲಿದೆ. 75ನೇ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 5Gಗಾಗಿ ಕಾಯುವಿಕೆ ಮುಗಿದಿದೆ, ಶೀಘ್ರದಲ್ಲೇ ಅದನ್ನು ಭಾರತದ ವಿವಿಧ ಮೂಲೆಗಳಿಗೆ ತಲುಪಿಸಲಾಗುವುದು ಎಂದು ಘೋಷಿಸಿದ್ದರು.
ಆದರೆ 5G ಭಾರತದಲ್ಲಿ ಯಾವಾಗ ಕಾರ್ಯಾರಂಭ ಮಾಡಲಿದೆ ಅನ್ನೋದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಏರ್ಟೆಲ್ ಹಾಗೂ ಜಿಯೋ ಈಗಾಗ್ಲೇ 5ಜಿ ಇಂಟರ್ನೆಟ್ ಸೇವೆ ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಏರ್ಟೆಲ್ ಆಗಸ್ಟ್‌ನಲ್ಲಿ 5G ಸೇವೆಯನ್ನು ಹೊರತರಲಿದೆ ಎಂದು ಸಿಇಓ ಗೋಪಾಲ್ ವಿಟ್ಟಲ್ ಇತ್ತೀಚೆಗಷ್ಟೆ ದೃಢಪಡಿಸಿದ್ದರು. ಇದಕ್ಕಾಗಿ ಸ್ಯಾಮ್‌ಸಂಗ್, ನೋಕಿಯಾ ಮತ್ತು ಎರಿಕ್ಸನ್‌ನಂತಹ ದೊಡ್ಡ ಟೆಕ್ ಕಂಪನಿಗಳ ಜೊತೆ ಏರ್ಟೆಲ್ ಕೈಜೋಡಿಸಿದೆ. 2024ರ ವೇಳೆಗೆ ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲಾ ಪಟ್ಟಣಗಳು ಮತ್ತು ನಗರಗಳಿಗೆ 5ಜಿ ಸೇವೆ ವಿಸ್ತರಿಸುವ ಯೋಜನೆ ಏರ್ಟೆಲ್ ಮುಂದಿದೆ.
ಇನ್ನು ಏರ್ಟೆಲ್‌ಗೆ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೋ ಕೂಡ ಅತಿ ಶೀಘ್ರದಲ್ಲಿ 5ಜಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ನಿರೀಕ್ಷೆ ಇದೆ. ಮೊದಲು ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ 5G ಇಂಟರ್ನಟ್ ಅನ್ನು ಹೊರತರುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ ಸೆಪ್ಟೆಂಬರ್ 29 ರಂದು IMCಯಲ್ಲಿ ಪ್ರಧಾನಿ ನರೇಂದ್ರ ಮೋದಿ 5G ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಅಂತಾ ಹೇಳಲಾಗ್ತಿದೆ. ಏರ್‌ಟೆಲ್ ಮೊದಲು 13 ನಗರಗಳಲ್ಲಿ 5G ಯನ್ನು ಹೊರತರಲಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಗೆ 5ಜಿ ನೆಟ್ವರ್ಕ್ ಲಭ್ಯವಾಗಲಿದೆ.
ಏರ್‌ಟೆಲ್ 5G ಸೇವೆಗಳ ಬೆಲೆ ಎಷ್ಟಿರಬಹುದು ?
ಏರ್‌ಟೆಲ್ 5G ಬೆಲೆಗಳು 4G ಪ್ರಿಪೇಯ್ಡ್ ಯೋಜನೆಗಳನ್ನೇ ಹೋಲಬಹುದು ಎಂಬ ನಿರೀಕ್ಷೆಯಿದೆ. ಜಾಗತಿಕವಾಗಿ ನೋಡಿದರೆ, 5G ಮತ್ತು 4G ವೆಚ್ಚಗಳ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಭಾರತದಲ್ಲಿ 5G ಯೋಜನೆಗಳು 4Gಯನ್ನೇ ಹೋಲುತ್ತವೆ ಅಂತಾ ಕಂಪನಿಯ CTO ರಣದೀಪ್ ಸೆಖೋನ್ ಹೇಳಿದ್ದಾರೆ. ಆದ್ರೆ ವೊಡಾಫೋನ್ ಐಡಿಯಾ, ತನ್ನ ಗ್ರಾಹಕರಿಂದ 5ಜಿ ಸೇವೆಗಾಗಿ ಹೆಚ್ಚಿನ ಹಣ ವಸೂಲಿ ಮಾಡುವ ಸಾಧ್ಯತೆ ಇದೆ. ಸದ್ಯ 4ಜಿ ಪ್ರಿಪೇಯ್ಡ್‌ನಲ್ಲಿ ಅನಿಯಮಿತ ಇಂಟರ್ನೆಟ್ ಸೇವೆಗಾಗಿ 500-600 ರೂಪಾಯಿ ವೆಚ್ಚ ಮಾಡಬೇಕು. 5G ಇಂಟರ್ನೆಟ್ ಕೂಡ ಇದೇ ಬೆಲೆಗೆ ಲಭ್ಯವಾಗುವ ನಿರೀಕ್ಷೆ ಇದೆ.