ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಅಲ್ಲಿ ಸಿಕ್ಕಿಹಾಕಿಕೊಂಡಿರೋ ಭಾರತೀಯ ವಿದ್ಯಾರ್ಥಿಗಳು ಜೀವ ಉಳಿಸಿಕೊಂಡು ತವರಿಗೆ ಮರಳಲು ಹರಸಾಹಸಪಡುತ್ತಿದ್ದಾರೆ.
ಭಾರತ ಸರ್ಕಾರ ಸುರಕ್ಷಿತವಾಗಿ ತಮ್ಮನ್ನು ಕರೆತರಬಹುದು ಅನ್ನೋ ನಿರೀಕ್ಷೆಯಲ್ಲಿರದೆ, ಉಕ್ರೇನ್ ನ ಸುಮಿ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದ್ತಿದ್ದ 800 ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ರಷ್ಯಾದ ಗಡಿಯತ್ತ ಹೊರಟಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. ರಷ್ಯಾ ಮಾನವೀಯತೆ ಆಧಾರದ ಮೇಲೆ ಎರಡು ನಗರದ ಕಾರಿಡಾರ್ ಗಳನ್ನು ನಾಗರಿಕರಿಗಾಗಿ ತೆರೆಯುವುದಾಗಿ ಹೇಳಿದೆ. ಅವುಗಳ ಪೈಕಿ ಒಂದು ಉಕ್ರೇನ್ ನ ಸುಮಿ ನಗರದಿಂದ 600 ಕಿಮೀ ದೂರವಿರುವ ಮರಿಯುಪೊಲ್. ಆದ್ರೆ ಬೆಳಗ್ಗೆಯಿಂದ್ಲೂ ಸುಮಿ ನಗರದಲ್ಲಿ ನಿರಂತರವಾಗಿ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಲೇ ಇದೆ.
ಇದರಿಂದ ನಾವೆಲ್ಲ ಭಯಭೀತರಾಗಿದ್ದು, ಬೇರೆ ವಿಧಿಯಿಲ್ಲದೆ ನಡೆದುಕೊಂಡೇ ರಷ್ಯಾ ಗಡಿಯತ್ತ ಹೊರಟಿದ್ದೇವೆ. ನಮಗೇನಾದರೂ ಅಪಾಯವಾದ್ರೆ ಅದಕ್ಕೆ ಭಾರತ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿಯೇ ಹೊಣೆ. ನಮ್ಮಲ್ಲಿ ಯಾರೊಬ್ಬರಿಗೆ ತೊಂದರೆಯಾದ್ರೂ ಭಾರತ ಸರ್ಕಾರದ ಮಿಷನ್ ಗಂಗಾ ಸಂಪೂರ್ಣ ವಿಫಲವಾದಂತೆ ಎಂದು ಆಕ್ರೋಶಭರಿತಳಾಗಿ ಹೇಳಿದ್ದಾಳೆ.
ಇದು ನಮ್ಮ ಕೊನೆಯ ವಿನಂತಿ ಮತ್ತು ಕೊನೆಯ ವಿಡಿಯೋ ಎಂದು ಮತ್ತೋರ್ವ ವಿದ್ಯಾರ್ಥಿನಿ ಹೇಳಿದ್ದಾಳೆ. ನಮಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾಳೆ. ಸುಮಿ ಯೂನಿವರ್ಸಿಟಿಯ ಹಾಸ್ಟೆಲ್ ನಲ್ಲಿ ಸುಮಾರು 800 ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಸುಮಿಯಲ್ಲಿ ಕಳೆದ 24 ಗಂಟೆಗಳಿಂದ ನೀರು ಪೂರೈಕೆ ಕೂಡ ನಿಂತು ಹೋಗಿದೆಯಂತೆ. ಇದರ ಬೆನ್ನಲ್ಲೇ ಬಾಂಬ್ ಸ್ಫೋಟ ಕೂಡ ತೀವ್ರಗೊಂಡಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಸಂಬಂಧಿಕರು ತೀವ್ರ ಆತಂಕಗೊಂಡಿದ್ದಾರೆ. ಮತ್ತೊಂದೆಡೆ ಆದಷ್ಟು ಬೇಗ ಕದನ ವಿರಾಮ ಘೋಷಿಸುವಂತೆ ಭಾರತ ಸರ್ಕಾರ, ರಷ್ಯಾ ಮತ್ತು ಉಕ್ರೇನ್ ಗೆ ಕಠಿಣ ಸಂದೇಶ ರವಾನಿಸಿದೆ.