ಸಾಂಬಾರು ಸೌತೆಕಾಯಿ ಅಥವಾ ಮಂಗಳೂರು ಸೌತೆಕಾಯಿ ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಪಿತ್ತ ನಿವಾರಕ ವಿಶೇಷವಾಗಿ ಸೌತೆಕಾಯಿ ಹಾಗೂ ಸಾಂಬಾರ್ ಸೌತೆಕಾಯಿ ಮಧುಮೇಹಿಗಳಿಗೂ ಉತ್ತಮ.
ಈ ಸಾಂಬಾರು ಸೌತೆಕಾಯಿಂದ ಹಲವಾರು ಆರೋಗ್ಯಕಾರಿ ಅಡುಗೆಗಳನ್ನು ಮಾಡಬಹುದು ವಿಶೇಷವಾಗಿ ಸಾಂಬಾರ್, ಮಜ್ಜಿಗೆ ಹುಳಿ, ಪಲ್ಯ, ತಂಬುಳಿ, ಜ್ಯೂಸ್ ಮೊದಲಾದವು. ಅವುಗಳಲ್ಲಿ ಸೌತೆಯ ಸಾಂಬಾರ್ ಹೆಚ್ಚು ಜನಪ್ರಿಯ. ಇದನ್ನು ಒಮ್ಮೆ ಎಲ್ಲರೂ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿ:
* ಸಾಂಬಾರ್ ಸೌತೆ ಅಥವಾ ಮಂಗಳೂರು ಸೌತೆ -1 ಮಧ್ಯಮ ಗಾತ್ರದ್ದು
* ನೆನೆಸಿದ ತೊಗರಿ ಬೇಳೆ 1/4 ಕಪ್
* ತೆಂಗಿನ ತುರಿ 1/2 ಕಪ್
* ಕೆಂಪು ಮೆಣಸು 3-4
* ತೊಗರಿ ಬೇಳೆ 2 ಚಮಚ
* ಉದ್ದಿನ ಬೇಳೆ 1/2 ಚಮಚ
* ದನಿಯಾ 2 ಚಮಚ
* ಮೆಂತ್ಯ -8-10 ಕಾಳು
* ಅರಿಷಿಣ ಸ್ವಲ್ಪ
* ಬೆಲ್ಲ 1 ಚಮಚ
* ಇಂಗು-ಸ್ವಲ್ಪ
* ಅಡುಗೆ ಎಣ್ಣೆ-1 ಚಮಚ
ಮಾಡುವ ವಿಧಾನ:
ತೊಳೆದ ಸೌತೆಕಾಯಿಯನ್ನು ಕತ್ತರಿಸಿ ಮಧ್ಯದ ತಿರುಳು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ನೆನೆಸಿದ ಬೇಳೆಯನ್ನು ಕುಕ್ಕರ್ ಗೆ ಹಾಕಿ ಅರ್ಧ ಕಪ್ ನೀರು, ಚಿಟಿಕೆ ಅರಿಷಿಣ ಹಾಕಿ ಒಂದು ವಿಸಿಲ್ ವರೆಗೆ ಬೇಯಿಸಿಕೊಳ್ಳಿ, ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಕೆಂಪು ಮೆಣಸು, ದನಿಯಾ, ಉದ್ದಿನ ಬೇಳೆ, ಮೆಂತ್ಯ, ಇಂಗು ಹಾಕಿ ಹುರಿದಿಟ್ಟುಕೊಳ್ಳಿ.
ಹೀಗೆ ಹುರಿದ ಮಸಾಲೆ ಹಾಗೂ ತೆಂಗಿನ ತುರಿಗೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ರುಬ್ಬಿದ ಮಸಾಲೆ ಮಿಶ್ರಣವನ್ನು ಹಾಗೂ ಕತ್ತರಿಸಿಟ್ಟುಕೊಂಡಿರುವ ಸೌತೆಕಾಯಿ ಹೋಳುಗಳನ್ನು ಬೇಯಿಸಿಟ್ಟುಕೊಂಡಿರುವ ಬೇಳೆ ಕುಕ್ಕರ್ ಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಬೆಲ್ಲ ಸೇರಿಸಿ. ಈಗ ನಿಮಗೆ ಸಾಂಬರ್ ಎಷ್ಟು ಬೇಕು ಅಷ್ಟು ಪ್ರಮಾಣದ ನೀರು ಸೇರಿಸಿ ಒಂದು ಕುದಿ ಬರುವವರೆಗೆ ಕುದಿಸಿ ಇಳಿಸಿ.
ಇದಕ್ಕೆ ಚಮಚ ಎಣ್ಣೆ, ಸಾಸಿವೆ, ಕರಿಬೇವು, ಒಂದು ಕೆಂಪು ಮೆಣಸು ಹಾಕಿ ಒಗ್ಗರಣೆ ಹಾಕಿ. ಬಿಸಿ ಅನ್ನದ ಜತೆ ರುಚಿ ರುಚಿಯಾದ ಸೌತೆಕಾಯಿ ಸಾಂಬಾರ್ ಸವಿಯಲು ಸಿದ್ಧ.