ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ.
ಅಮೃತಬಳ್ಳಿಯ ಎಲೆ ಹಾಗೂ ಕಾಂಡ ಎರಡೂ ಉಪಕಾರಿ. ನೀರಿಗೆ ಬಳ್ಳಿಯನ್ನು ಹಾಕಿ ಮೂರು ಲೋಟ ನೀರನ್ನು ಒಂದು ಲೋಟವಾಗುವಷ್ಟು ಕುದಿಸಿ. ಅದಕ್ಕೆ ತುಸು ಜೇನು ಹಾಕಿ. ಕಷಾಯವನ್ನು ದಿನಕ್ಕೆ ಮೂರು ಬಾರಿ ಮಕ್ಕಳಿಗೆ ಕುಡಿಸುವುದರಿಂದ ಕೆಮ್ಮು, ಶೀತ, ಜ್ವರ ಕಡಿಮೆಯಾಗುತ್ತದೆ.
ಇದೇ ಕುದಿಸಿದ ನೀರಿಗೆ ಶುಂಠಿ, ಕಾಳುಮೆಣಸು, ಹಾಕಿ ಸೇವಿಸಿದರೆ ದೊಡ್ಡವರ ಕೆಮ್ಮು ಶೀತವೂ ಕಡಿಮೆಯಾಗುತ್ತದೆ. ವಾತ, ಪಿತ್ತ, ಕಫವನ್ನು ಕಡಿಮೆಗೊಳಿಸುವ ಇದಕ್ಕೆ ಸಾಂಬಾರಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ, ಲವಂಗ ಹಾಕಿ ಕುದಿಸಿ ಸೋಸಿ ನಿತ್ಯ ಕುಡಿದರೆ ಸದಾ ಕಾಡುವ ಸೀನುವಿಕೆ, ಮೂಗುಸೋರುವಿಕೆ ಹತ್ತಿರವೂ ಸುಳಿಯದಂತೆ ದೂರವಾಗುತ್ತದೆ.