ವಂಚಕರಿಂದ ಮೋಸ ಹೋಗದಂತೆ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಿತವಾಗಿ ಸಲಹೆಗಳನ್ನು ಬಿಡುಗಡೆ ಮಾಡುತ್ತದೆ. ಗ್ರಾಹಕರನ್ನ ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತದೆ. ಹೊಸ ಹೊಸ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಗ್ರಾಹಕರಿಂದ ಮಾಹಿತಿ ಪಡೆದು ಹಣ ಲಪಟಾಯಿಸಲು ವಂಚಕರಿಗೆ ಬೇರೆ ಬೇರೆ ಮಾರ್ಗಗಳು ಸೃಷ್ಟಿಯಾಗಿವೆ.
ಹಾಗಾಗಿ SBI ತನ್ನ ಸಲಹಾ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಿದೆ. ಇದು ರಾಂಗ್ ನಂಬರ್ ಎಂದು ಹೇಳಿ ಗ್ರಾಹಕರನ್ನು ವಂಚಿಸುತ್ತಿರುವ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಮೂಡಿಸಲು ಎಸ್ ಬಿ ಐ ಪ್ರಯತ್ನಿಸುತ್ತಿದೆ. ಖಾತೆ ನವೀಕರಿಸಲು ಮೆಸೇಜ್ ಗಳಲ್ಲಿ ಕಳಿಸಲಾದ ಎಂಬೆಡೆಡ್ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಎಸ್ ಬಿ ಐ ಸೂಚಿಸಿದೆ. ಯಾವ ರೀತಿ ಗ್ರಾಹಕರಿಗೆ ವಂಚಕರು ಮೋಸ ಮಾಡುತ್ತಾರೆ ಎಂಬ ಬಗ್ಗೆ ಮೆಸೇಜ್ ಒಂದನ್ನು ಸಹ ಎಸ್ ಬಿ ಐ ಬಿಡುಗಡೆ ಮಾಡಿದೆ.
ನಿಮ್ಮ ಎಸ್ ಬಿ ಐ ದಾಖಲೆಗಳ ವ್ಯಾಲಿಡಿಟಿ ಮುಗಿದಿದೆ. 24 ಗಂಟೆಗಳೊಳಗೆ ನಿಮ್ಮ ಖಾತೆ ಬ್ಲಾಕ್ ಆಗಿಬಿಡುತ್ತದೆ, ಹಾಗಾಗಿ ನಿಮಗೆ ನೀಡಿರುವ ಯು ಆರ್ ಎಲ್ ಮೂಲಕ ಕೆವೈಸಿ ಅಪ್ಡೇಟ್ ಮಾಡುವಂತೆ ವಂಚಕರು ಸೂಚಿಸಬಹುದು. ಅಪ್ಪಿತಪ್ಪಿಯೂ ಹಾಗೆ ಮಾಡಬೇಡಿ. ಯಾಕಂದ್ರೆ ಎಸ್ ಬಿ ಐ ಈ ರೀತಿ ಎಸ್ ಎಂ ಎಸ್ ನಲ್ಲಿ ಕಳುಹಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆವೈಸಿ ಅಪ್ಡೇಟ್ ಮಾಡುವಂತೆ ಕೇಳುವುದೇ ಇಲ್ಲ ಅಂತಾ ಬ್ಯಾಂಕ್ ಸ್ಪಷ್ಟಪಡಿಸಿದೆ.
ಈ ರೀತಿ ಯು ಆರ್ ಎಲ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿರೋ ಹಣವನ್ನು ಲೂಟಿ ಮಾಡುವುದು ವಂಚಕರಿಗೆ ಸುಲಭವಾಗುತ್ತದೆ ಅಂತಾ ಬ್ಯಾಂಕ್ ಎಚ್ಚರಿಕೆ ನೀಡಿದೆ. ಇದಲ್ಲದೆ ಓಟಿಪಿ ಅಥವಾ ವೇರಿಫಿಕೇಶನ್ ಕೋಡ್ ಗಳನ್ನು ಕೂಡ ಯಾರೊಂದಿಗೂ ಶೇರ್ ಮಾಡದಂತೆ ಸೂಚಿಸಿದೆ.